ಔಷಧ ಘಟಕದಲ್ಲಿ ಭೀಕರ ಸ್ಫೋಟ: 35 ಮಂದಿ ಸಾವು

ಹೈದರಾಬಾದ್: ಸಿಗಾಚಿ ಇಂಡಸ್ಟ್ರೀಸ್ ನ ಪಾಶಮೈಲಾರಂನಲ್ಲಿರುವ ಔಷಧ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
31 ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ.
ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್ ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಸ್ಫೋಟಕ್ಕೆ ನಿಖರ ಕಾರಣ ಸಮಗ್ರ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.
ತೆಲಂಗಾಣ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ ಮೃತಪಟ್ಟ ಕನಿಷ್ಠ ಎಂಟು ಜನರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಗೊಂಡ ಸುಮಾರು ಹನ್ನೆರಡು ಜನರಿಗೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸೋಮವಾರ ಬೆಳಿಗ್ಗೆ 9.28ರಿಂದ 9.35ರ ನಡುವೆ ಸ್ಫೋಟ ಸಂಭವಿಸಿತ್ತು. ಈ ವೇಳೆ ಕಾರ್ಖಾನೆಯಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸುಮಾರು 90 ಮಂದಿ ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಇದ್ದರು ಎಂದು ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ಐಜಿಪಿ ವಿ.ಸತ್ಯನಾರಾಯಣ ಹೇಳಿದ್ದರು. ಸತ್ತವರಲ್ಲಿ ಕೆಲವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿಎನ್ ಎ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: