ಹಳಸಿದ ದಾಲ್ ನೀಡಿದ್ದಕ್ಕಾಗಿ ಹೊಟೇಲ್ ಸಿಬ್ಬಂದಿಗೆ ಶಾಸಕನಿಂದ ಹಲ್ಲೆ, ಹೊಟೇಲ್ ಲೈಸೆನ್ಸ್ ರದ್ದು!
ಮುಂಬೈ(Mahanayaka): ಹಳಸಿದ ದಾಲ್ ನೀಡಿದ ಹೊಟೇಲ್ ಸಿಬ್ಬಂದಿಗೆ ಶಿವಸೇನಾ ಶಾಸಕರೊಬ್ಬರು ಹಲ್ಲೆ ನಡೆಸಿದ್ದಲ್ಲದೇ, ಕ್ಯಾಂಟೀನ್ ಪರವಾನಗಿಯನ್ನೇ ರದ್ದುಗೊಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಘಟನೆ ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಹೊಟೇಲ್ ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಶಾಸಕರು ಹಲ್ಲೆ ನಡೆಸಿರುವ ಬೆನ್ನಲ್ಲೇ ಘಟನೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಶಾಸಕರು ಎಂದ ಮಾತ್ರಕ್ಕೆ ಯಾರ ಮೇಲೆಯೂ ಹಲ್ಲೆ ನಡೆಸಬಹುದೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶಾಸಕರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು.
ಬಳಿಕ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಪರೀಕ್ಷೆಗಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿತು. ಇದಾಗಿ ಕೆಲವೇ ಗಂಟೆಗಳ ನಂತರ ಹೊಟೇಲ್ ನ ಪರವಾನಗಿ ರದ್ದುಗೊಳಿಸುವ ನಿರ್ಧಾರ ಬಂದಿದೆ.
ಅಡುಗೆಮನೆಯ ನೆಲದ ಮೇಲೆ ತ್ಯಾಜ್ಯ ವಸ್ತುಗಳು ಬಿದ್ದಿರುವುದು ಕಂಡುಬಂದಿದ್ದು, ಅದನ್ನು ಸರಿಯಾಗಿ ಸ್ವಚ್ಛಗೊಳಿಸಲಾಗಿಲ್ಲ. ಮಾಂಸಾಹಾರ ಮತ್ತು ತರಕಾರಿ ತಯಾರಿಕೆಗೆ ಸೂಕ್ತ ಪ್ರತ್ಯೇಕ ವ್ಯವಸ್ಥೆಗಳಿಲ್ಲ. ಕೆಲಸಗಾರರಿಗೆ ಬಟ್ಟೆ ಬದಲಾಯಿಸುವ ಕೊಠಡಿ ಇಲ್ಲ. ತೆರೆದ ಕಸದ ಬುಟ್ಟಿಗಳು, ನೆಲದ ಮೇಲೆ ಮೊಟ್ಟೆಯ ಚಿಪ್ಪುಗಳು ಮತ್ತು ಕಸದ ಬುಟ್ಟಿಗಳ ಬಳಿ ಇರಿಸಲಾದ ಸಿದ್ಧಪಡಿಸಿದ ಆಹಾರ, ಕಾರ್ಮಿಕರು ಕೈಗವಸುಗಳು ಮತ್ತು ಸಮವಸ್ತ್ರಗಳಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರಗಳನ್ನು ಗಮನಿಸಿ ಹೊಟೇಲ್ ನ ಪರವಾನಗಿ ರದ್ದುಗೊಳಿಸಿರುವುದಾಗಿ ತಿಳಿಸಲಾಗಿದೆ.
ಹಲ್ಲೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ತನ್ನ ಕೃತ್ಯವನ್ನು ಸಮರ್ಥಿಸಿದ್ದ ಶಾಸಕ ಸಂಜಯ್ ಗಾಯಕ್ವಾಡ್ ,ನಾನು ಒಬ್ಬ ಶಾಸಕ ಮತ್ತು ಯೋಧ ಕೂಡ. ಪದೇ ಪದೇ ಪ್ರಯತ್ನಿಸಿದರೂ ಯಾರಾದರೂ ಅರ್ಥಮಾಡಿಕೊಳ್ಳಲು ಬಯಸದಿದ್ದಾಗ, ನಾನು ಬಾಳಾಸಾಹೇಬ್ ಠಾಕ್ರೆ ನಮಗೆ ಕಲಿಸಿದ ಭಾಷೆಯನ್ನು ಬಳಸಿದೆ. ನಾನು ಜೂಡೋ, ಜಿಮ್ನಾಸ್ಟಿಕ್ಸ್ ಮತ್ತು ಕರಾಟೆ ಮತ್ತು ಕುಸ್ತಿಯಲ್ಲಿ ಚಾಂಪಿಯನ್. ನಾನು ಗಾಂಧಿವಾದಿಯಲ್ಲ. ನನಗೆ ಯಾವುದೇ ವಿಷಾದವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಎತ್ತುತ್ತೇನೆ ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























