ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಹೆಸರಿಡಲು ಬನ್ಸ್, ಗೋಳಿಬಜೆ, ನಿರುದೋಸೆ ಇದ್ದರಷ್ಟೇ ಸಾಕೇ ?

- ಸಂತೋಷ್ ಬಜಾಲ್
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಹೆಸರಿಡಲು ಒತ್ತಾಯಿಸುತ್ತಿರುವವರು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಮುಖ ತಿಂಡಿಗಳಾದ ಬನ್ಸ್, ಗೋಳಿಬಜೆ, ನೀರುದೋಸೆ ಮತ್ತು ಮಲ್ಲಿಗೆ ಬೆಳೆಸುತ್ತಿರುವ ಕಾರಣಕ್ಕೋಸ್ಕರ ಮಂಗಳೂರು ಹೆಸರೇ ಸೂಕ್ತ ಎಂದು ಅಂದಾಜಿಸಿದ್ದಾರೆ. ಉಳಿದಂತೆ ಇಲ್ಲಿನ ಪ್ರತೀ ತಾಲೂಕಿನ ಆಹಾರ ಕ್ರಮ, ಭಾಷೆಯ ಶೈಲಿ, ಜೀವನ ವಿಧಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯ ಬಗ್ಗೆ ವಿವರಣೆಗಳಿಲ್ಲ. ಅಸಲಿಗೆ ಮಂಗಳೂರಿನ ಅಸ್ಮಿತೆ ಉಳಿಸುವಂತಹ ಯಾವ ಒಂದು ಸಂಕೇತಗಳಾಗಲಿ, ಕ್ಷೇತ್ರಗಳಾಗಲಿ ಅದು ಮಂಗಳೂರಿಗರ ಸ್ವಂತವಾಗಿ ಉಳಿದಿಲ್ಲ. ಇಂತಹ ವಿಷಯಗಳ ಬಗ್ಗೆ ಅವರೆಲ್ಲಾ ಏನನ್ನುತ್ತಾರೋ ಗೊತ್ತಿಲ್ಲ. ಅಸಲಿಗೆ ದಕ್ಷಿಣ ಕನ್ನಡ ಜಿಲ್ಲೆಯೇ ನಮ್ಮದೆನ್ನಲು ಯಾವ ಕುರುಹುವನ್ನು ಉಳಿದಿಲ್ಲ ಮತ್ತು ಉಳಿಸಲು ಬಿಟ್ಟಿಲ್ಲ ಅಂತಹದರಲ್ಲಿ ಬನ್ಸ್, ಗೋಳಿಬಜೆ, ನಿರುದೋಸೆ ಉಳಿಯೋದರಿಂದ ಈ ಜಿಲ್ಲೆಗೇನು ಪ್ರಯೋಜನ?.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ನಮ್ಮದೆಂದು ಎನ್ನ ಬಹುದಾಗಿದ್ದ ಯಾವ ಸೊತ್ತು ಈಗ ನಮ್ಮವದೇ ಆಗಿ ಉಳಿದಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಮಂಗಳೂರಿಗರದಲ್ಲ ಅದು ಪಿಪಿಪಿ ಅಡಿಯಲ್ಲಿ ಈಗ ಗುಜರಾತಿನ ಅದಾನಿಯದ್ದು. ವೆನ್ಲಾಕ್ ಲೇಡಿಗೋಶನ್ ಆಸ್ಪತ್ರೆ ಅದೂ ಈಗ ಪಿಪಿಪಿ ಅಡಿಯಲ್ಲಿ ಖಾಸಗಿಯರ ಪಾಲು, ಎ.ಬಿ ಶೆಟ್ಟಿ ಪ್ರಾರಂಭಿಸಿದ ವಿಜಯ ಬ್ಯಾಂಕ್ ಅದೂ ಗುಜರಾತಿನ ಬರೋಡ ಬ್ಯಾಂಕ್ ಜೊತೆ ವಿಲೀನಗೊಂಡಿದೆ. ಹಾಜಿ ಅಬ್ದುಲ್ಲರು ಪ್ರಾರಂಭಿಸಿದ ಕಾರ್ಪೊರೇಷನ್ ಬ್ಯಾಂಕ್ ಮುಂಬೈ ಮೂಲದ ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಂಡಿದೆ. ಇನ್ನು ಆ ಬ್ಯಾಂಕ್ ಗಳಲ್ಲಿ ದುಡಿಯುವವರು ಎಲ್ಲರೂ ಬಹುತೇಕ ಉತ್ತರ ಭಾರತದ ಅಥವಾ ಅನ್ಯ ರಾಜ್ಯದ ನಿವಾಸಿಗಳು. ಇಲ್ಲಿನ ಸರಕಾರಿ ಶಾಲೆಗಳೆಲ್ಲಾ ಮೂಲಭೂತ ಸೌಕರ್ಯಗಳಿಲ್ಲದೆ ಕೇವಲ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಮಕ್ಕಳ ಶಾಲೆಯಾಗಿ ಪರಿವರ್ತನೆಗೊಂಡಿದೆ. ಇನ್ನು ನಮ್ಮದೆನ್ನಲು ಏನಿದೆ? ಸರಕಾರಿ ಮೆಡಿಕಲ್ ಕಾಲೇಜಾಗಲಿ, ಸರಕಾರಿ ಇಂಜನೀಯರಿಂಗ್ ಕಾಲೇಜಾಗಲಿ ಅದು ಸ್ಥಾಪನೆಯೇ ಗೊಂಡಿಲ್ಲ. ಸರಕಾರಿ ಆರೋಗ್ಯಕೇಂದ್ರ, ಆಸ್ಪತ್ರೆಗಳಲ್ಲೂ ಎಲ್ಲಾ ಬಗೆಯ ಸೌಕರ್ಯಗಳಿಲ್ಲದೆ ಅದರತ್ತ ಸುಳಿಯುವವರೂ ಇಲ್ಲ.
ಅಲ್ಲದೆ ನಮ್ಮ ನೆಲ, ಜಲವನ್ನು ಕಸಿದುಕೊಂಡು ನಿರ್ಮಾಣಗೊಂಡಿರುವ ಎಮ್.ಆರ್.ಪಿ.ಎಲ್ ನಂತಹ ಸಾರ್ವಜನಿಕ ವಲಯದ ಕೈಗಾರಿಕೆಗಳಿಂದ ಹಿಡಿದು ಯಾವೊಂದು ಕೈಗಾರಿಗೆಗಳಲ್ಲಿ ಸೃಷ್ಟಿಯಾಗಿರುವ ಎಲ್ಲಾ ಬಗೆಯ ಉದ್ಯೋಗಗಳು ( ಖಾಯಂ ಅಥವಾ ಗುತ್ತಿಗೆಯಾಗಲಿ) ನಮ್ಮ ಜಿಲ್ಲೆಯ ಜನರ ಹಕ್ಕಾಗಿ ಉಳಿಯದೆ ಅದು ಉತ್ತರ ಭಾರತದ ಅಂದರೆ ಅನ್ಯ ರಾಜ್ಯದ ಜನರ ಪಾಲಾಗುತ್ತಿದೆ. ಇಲ್ಲಿನ ಪ್ರಮುಖ ಉದ್ದಿಮೆ ಮೀನುಗಾರಿಕೆಯ ಕೆಲಸಗಳಿಂದ ಹಿಡಿದು, ಅಡಿಕೆ, ರಬ್ಬರ್, ಸೆಕ್ಯೂರಿಟಿ, ಹೊಟೇಲ್, ಕಟ್ಟಡ, ಎಲ್ಲ ಕ್ಷೇತ್ರಗಳಲ್ಲೂ ದಕ್ಷಿಣ ಕನ್ನಡದ ಕಾರ್ಮಿಕರ ಪತ್ತೆಯೇ ಸಿಗದಷ್ಟು ಅಪರೂಪ. ಇಲ್ಲಿನ ಹೈವೇ ರಸ್ತೆಗಳೆಲ್ಲಿ ನಾವು ಓಡಾಡಬೇಕಾದರೆ ಆಂದ್ರ ಮೂಲದ ನವಯುಗ್ ಕಂಪೆನಿಗೆ ಟೋಲ್ ಸುಂಕ ಸಲ್ಲಿಸಬೇಕು.
ಜಿಲ್ಲೆಯನ್ನು ಬಾಧಿಸುವ ಸಮಸ್ಯೆಗಳನ್ನು ಪಟ್ಟಿ ಮಾಡಲು ಹೊರಟರೆ ಒಂದಾ ಎರಡಾ, ಹೇಳಿದಷ್ಟು ಮುಗಿಯದ ಅಧ್ಯಾಯಗಳು ಮೇಲಿಂದ ಮೇಲೆ ಧಾವಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಡಿ ಮಿಡಿತವನ್ನು ಸೂಕ್ಷ್ಮವಾಗಿ ಅರ್ಥೈಸುವಲ್ಲಿ ಕೊರತೆಗಳು ನಮ್ಮಲ್ಲಿ ಎದ್ದು ಕಾಣುತ್ತಿವೆ. ಹೇಗೆ ಮಂಗಳೂರು ಆಕಾಶವಾಣಿಗೆ ಕೇಳುಗರಿಲ್ಲದೆ ಕೊರಗುತ್ತಿದೆಯೋ ಹಾಗೆ ಇಲ್ಲಿನ ಸಮಸ್ಯೆಗಳನ್ನು ಕೇಳುವ ಕಿವಿಗಳೂ ಇಲ್ಲ ಕೂಗುವ ದ್ವನಿಗಳೂ ಇಲ್ಲ. ಆಕಾಶವಾಣಿ ಎಂದರೆ ಆಕಾಶದಿಂದ ಕೇಳುವ ದನಿ ಎಂದರ್ಥ. ಸದ್ಯ ನಾವೀಗ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಸಿನಾಳದ ದನಿಯಾಗಬೇಕು. ಕಾಲ ಕಾಲಕ್ಕೂ ಈ ನಾಡಿನ ಸಾಹಿತಿಗಳು, ಬರಹಗಾರರು, ಹಿರಿಯ ತಲೆಮಾರುಗಳು, ಪ್ರಬುದ್ದ ರಾಜಕಾರಣಿಗಳು ಕಲೆ, ಸಾಹಿತ್ಯ, ಸಂಸ್ಕೃತಿ, ಸೌಹಾರ್ದತೆ, ಅಭಿವೃದ್ಧಿಯ ಕೊಡುಗೆಗಳನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಯನ್ನು ಎತ್ತಿಹಿಡಿಯಲೆತ್ನಿಸಿದ ಕೆಲಸಗಳೇ ಮಾದರಿಯಾಗಬೇಕು ಹೊರತು ಇಲ್ಲಿ ಬನ್ಸ್, ಗೋಳಿಬಜೆ, ನೀರುದೋಸೆಗಳಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD