ಲೈಂಗಿಕ ಕಿರುಕುಳ: ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ ಸಾವು - Mahanayaka

ಲೈಂಗಿಕ ಕಿರುಕುಳ: ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ ಸಾವು

odisha
15/07/2025

Mahanayaka –ಭುವನೇಶ್ವರ:  ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದರೂ ಪ್ರೊಫೆಸರ್ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕ್ರಮಕೈಗೊಳ್ಳದ ಹಿನ್ನೆಲೆ ನೊಂದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ಕೊಠಡಿ ಬಳಿಯಲ್ಲೇ ಬೆಂಕಿ ಹಚ್ಚಿಕೊಂಡಿದ್ದು, ಮೂರು ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾಳೆ.

ಒಡಿಶಾದ 22 ವರ್ಷದ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದವಳಾಗಿದ್ದಾಳೆ.  ಆಕೆಯನ್ನು ಬದುಕಿಸಲು ನಾನಾ ರೀತಿಯ ಪ್ರಯತ್ನಗಳನ್ನು ನಡೆಸಲಾದರೂ ಆಕೆ ಬದುಕುಳಿಯಲಿಲ್ಲ.

ಬಾಲಸೋರ್‌ ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ಬಿ.ಎಡ್ ವಿದ್ಯಾರ್ಥಿನಿಯಾಗಿರುವ ವಿದ್ಯಾರ್ಥಿನಿ ಜುಲೈ 1 ರಂದು ತನ್ನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಸಮೀರ್ ಕುಮಾರ್ ಸಾಹು ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಕಾಲೇಜಿನ ಆಂತರಿಕ ದೂರು ಸಮಿತಿಗೆ ಬರೆದ ಪತ್ರದಲ್ಲಿ ಪ್ರಾಧ್ಯಾಪಕರಿಂದ ತಿಂಗಳುಗಳ ಕಾಲ ದೌರ್ಜನ್ಯ ಮತ್ತು ಬೆದರಿಕೆ ಹಾಕಲಾಗಿರುವ ಬಗ್ಗೆ  ಆಕೆ ವಿವರವಾಗಿ ದೂರು ನೀಡಿದ್ದಳು, ಆದರೆ ಪ್ರಾಧ್ಯಾಪಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.  ಏಳು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು, ಆದರೆ ಏನೂ ಆಗಲಿಲ್ಲ.

ಜುಲೈ 12 ರಂದು, ವಿದ್ಯಾರ್ಥಿನಿ ಮತ್ತು ಇತರ ಹಲವಾರು ವಿದ್ಯಾರ್ಥಿಗಳು ಕಾಲೇಜು ದ್ವಾರದ ಹೊರಗೆ ಪ್ರತಿಭಟನೆ ಆರಂಭಿಸಿದರು. ಸಹ ವಿದ್ಯಾರ್ಥಿಗಳ ಪ್ರಕಾರ, ಪ್ರತಿಭಟನೆಯ ನಡುವೆ, ವಿದ್ಯಾರ್ಥನಿ ಇದ್ದಕ್ಕಿದ್ದಂತೆ ಎದ್ದು, ಪ್ರಾಂಶುಪಾಲರ ಕಚೇರಿಯ ಬಳಿಯ ಪ್ರದೇಶಕ್ಕೆ ಓಡಿಹೋಗಿ, ಬೆಂಕಿ ಹಚ್ಚಿಕೊಂಡಿದ್ದಾಳೆ ಪರಿಣಾಮವಾಗಿ ಆಕೆ,  ಶೇ. 90 ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದಳು. ತಕ್ಷಣವೇ  ಆಕೆಯನ್ನು ಭುವನೇಶ್ವರದ ಏಮ್ಸ್‌ ಗೆ ಕರೆದೊಯ್ಯಲಾಯಿತು.  ನಿನ್ನೆ ತಡರಾತ್ರಿ ಆಸ್ಪತ್ರೆಯು ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ವಿದ್ಯಾರ್ಥಿನಿಯ ಸಾವಿನ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂತಾಪ ಸೂಚಿಸಿದರು ಮತ್ತು ತಪ್ಪಿತಸ್ಥರೆಲ್ಲರೂ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಭಾಗದ ಮುಖ್ಯಸ್ಥರು ಮತ್ತು ಕಾಲೇಜಿನ ಪ್ರಾಂಶುಪಾಲ ದಿಲೀಪ್ ಘೋಷ್ ಇಬ್ಬರನ್ನೂ ಬಂಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ