ಧರ್ಮಸ್ಥಳ ಪ್ರಕರಣ: ಕಣ್ಣೆದುರೇ ಸಾಕ್ಷಿ ಇದ್ದರೂ, ರಾಜ್ಯ ಸರ್ಕಾರದ ಮೌನಕ್ಕೆ ಅರ್ಥ ಏನು?

ಧರ್ಮಸ್ಥಳ ಸುತ್ತ ಮುತ್ತ ಪ್ರದೇಶಗಳಲ್ಲಿ ತನಗೆ ಪ್ರಾಣ ಬೆದರಿಕೆ ಹಾಕಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದು, ಇದೀಗ ಪಾಪ ಪ್ರಜ್ಞೆಯಿಂದ ಅಪರಾಧ ಕೃತ್ಯ ನಡೆಸಿದವರ ಮಾಹಿತಿ ನೀಡುತ್ತೇನೆ ಎಂದು ಜು.3ರಂದು ದ.ಕ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಠಾಣೆಗೆ ವ್ಯಕ್ತಿಯೊಬ್ಬ ದೂರು ನೀಡಿರುವ ಪ್ರಕರಣದಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ದೇಶಾದ್ಯಂತ ಈ ಪ್ರಕರಣ ಕಿಡಿ ಹತ್ತಿಸಿದೆ, ಪಕ್ಕದ ರಾಜ್ಯ ಕೇರಳದಲ್ಲಿ ಈ ಪ್ರಕರಣದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ, ಮಾಧ್ಯಮಗಳಲ್ಲಿ ದೊಡ್ಡ ಡಿಬೆಟ್ ಗಳು ಆರಂಭವಾಗಿದೆ. ಕರ್ನಾಟಕ ಸರ್ಕಾರದ ವೈಫಲ್ಯದ ಬಗ್ಗೆ ನೆರೆಯ ರಾಜ್ಯಗಳ ಮಾಧ್ಯಮಗಳು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದೆ. ಇನ್ನೊಂದೆಡೆ ಸಾಕ್ಷಿ ಹೇಳುತ್ತೇನೆಂದು ಬಂದಿರುವ ವ್ಯಕ್ತಿ ಮತ್ತು ಆತನ ವಕೀಲರು ಧರ್ಮಸ್ಥಳಕ್ಕೆ ಆಗಮಿಸಿದರೂ, ಸ್ಥಳಕ್ಕೆ ಪೊಲೀಸರು ಆಗಮಿಸಿಲ್ಲ ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಗೃಹ ಸಚಿವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಹಲವಾರು ಅನುಮಾನಗಳನ್ನು ಸೃಷ್ಟಿಸಿದೆ. ರಾಜ್ಯ ಸರ್ಕಾರ ನೇರವಾಗಿ ಯಾರ ಪರವಾಗಿದೆ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ. ಇಷ್ಟೊಂದು ದೊಡ್ಡ ಪ್ರಕರಣವನ್ನು ರಾಜ್ಯ ಸರ್ಕಾರ ಇಷ್ಟೊಂದು ನಿರ್ಲಕ್ಷ್ಯದಿಂದ ನೋಡುತ್ತಿದೆ. ಸಾಕ್ಷಿ ಕಣ್ಣಮುಂದೆ ಇದ್ದರೂ, ಸಾಕ್ಷಿ ನಾಶವಾಗಲು ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅವಕಾಶ ನೀಡುತ್ತಿದೆಯೇ? ಎನ್ನುವ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ, ಹಾಗಾಗಿ ಎಸ್ ಐಟಿಯಿಂದ ಈ ಪ್ರಕರಣದ ತನಿಖೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ನಡುವೆ ಅನನ್ಯ ಭಟ್ ಎಂಬ ಯುವತಿಯ ತಾಯಿ ಕೂಡ ದೂರು ನೀಡಿ, ತನ್ನ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು, ಆಕೆಯ ಕಳೇಬರವನ್ನು ಹುಡುಕಿ ಕೊಡಿ ಎಂದು ದೂರು ದಾಖಲಿಸಿದ್ದಾರೆ. ಇಷ್ಟಾದರೂ ಇನ್ನೂ ಯಾಕೆ ಪೊಲೀಸರು ಸಾಕ್ಷಿಯನ್ನೇ ಅನುಮಾನಿಸುತ್ತಿದ್ದಾರೆ? ರಾಜ್ಯ ಸರ್ಕಾರ ಯಾಕೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ ಎನ್ನುವ ಪ್ರಶ್ನೆಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಹಲವಾರು ವರ್ಷಗಳಿಂದ ಧರ್ಮಸ್ಥಳ ಸುತ್ತಮುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ನೂರಾರು ಕಥೆಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿರೂಪದಲ್ಲೇ ವ್ಯಕ್ತಿಯೊಬ್ಬ ಸಾಕ್ಷಿ ಹೇಳಲು ಬಂದಾಗ, ತಕ್ಷಣ ತನಿಖೆ ನಡೆಯಬೇಕಿತ್ತು. ಆದರೆ ಇನ್ನೂ ಮೃತದೇಹವನ್ನು ಹೊರ ತೆಗೆಯಲು ಮೀನಾಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD