ಹೂತ ಶವ ಹೊರ ತೆಗೆಯದೇ ಮಂಪರು ಪರೀಕ್ಷೆ ಮಾಡಿ ಅಂತ ಯಾವ ಹುಚ್ಚನೂ ಕೇಳೋದಿಲ್ಲ: ಕೆ.ವಿ. ಧನಂಜಯ್

ಬೆಂಗಳೂರು: ಆ ವ್ಯಕ್ತಿ ತಾನು ಹೂತ ಶವಗಳನ್ನು ಹೊರ ತೆಗೆಯುತ್ತೇನೆ ಎಂದರೂ, ಪೊಲೀಸರು ಹೊರ ತೆಗೆಯಲು ಮುಂದಾಗ್ತಿಲ್ಲ, ಆತನ ಮಂಪರು ಪರೀಕ್ಷೆ ಕೇಳುತ್ತಿದ್ದಾರೆ. ಹೂತ ಮೃತದೇಹ ಹೊರ ತೆಗೆಯದೇ ಮಂಪರು ಪರೀಕ್ಷೆಯನ್ನು ಯಾವ ಹುಚ್ಚನೂ ಕೇಳುವುದಿಲ್ಲ ಎಂದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ಕೆ.ವಿ. ಧನಂಜಯ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವ್ಯಕ್ತಿಯೊಬ್ಬ ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ, ಹತ್ಯೆ ನಡೆಸಲಾಗಿರುವ ಮೃತಹದೇಹಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ಹೇಳಲು ಮುಂದೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹೂತ ದೇಹಗಳನ್ನು ತೆಗೆಯುವ ಮುನ್ನ ನಾರ್ಕೋ ಅನಾಲಿಸಿಸ್ ಯಾವ ಹುಚ್ಚನೂ ಕೇಳೋದಿಲ್ಲ ಎಂದಿದ್ದಾರೆ.
ಹೂತ ದೇಹಗಳನ್ನು ಹೊರ ತೆಗೆಯದೇ ಯಾಕೆ ಮಂಪರು ಪರೀಕ್ಷೆ ಮಾಡಬೇಕು? ಹೂತ ಮೃತದೇಹಗಳನ್ನು ಮೊದಲು ಹೊರ ತೆಗೆಯಬೇಕು, ನಂತರ ಯಾರು ಕೊಲೆಯನ್ನು ಮಾಡಿದ್ದಾರೆ, ಈತನಿಗೆ ಆ ನೆನಪು ಇದೆಯಾ ಎನ್ನುವುದನ್ನು ತಿಳಿಯಲು ಮಂಪರು ಪರೀಕ್ಷೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ಉದಾಹರಣೆ ನೀಡಿದ ಅವರು, ಆ ವ್ಯಕ್ತಿ ನಿಮ್ಮ ಮುಂದೆಯೇ ನಿಂತಿದ್ದಾನೆ. ಆತ ಚಿನ್ನದ ಸರ ಕದ್ದಿದ್ದೀನಿ ಅಂತ ಮ್ಯಾಜಿಸ್ಟ್ರೇಟ್ ಮುಂದೆ ಹೇಳುತ್ತಿದ್ದಾನೆ. ಈಗ ಬ್ರೈನ್ ಮ್ಯಾಪ್ ಮಾಡಿಸ್ತೀನಿ, ಅಲ್ಲಿ ಹೋಗಿ ಆ ರಿಪೋರ್ಟ್ ತಗೋಳ್ತೀನಿ, ಇಲ್ಲಿ ಹೋಗಿ ಈ ರಿಪೋರ್ಟ್ ತಗೋಳ್ತೀನಿ ಅನ್ನೋ ಅಗತ್ಯ ಇದೆಯಾ? ಯಾವ ಕಾನೂನು ಓದಿಕೊಂಡಿದ್ದಾರೆ ಅವರು, ನನಗೆ ಅರ್ಥವೇ ಆಗ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆ ವ್ಯಕ್ತಿ (ಸಾಕ್ಷಿ)ಯನ್ನು ಆತ ಹೂತು ಹಾಕಿದ್ದೇನೆ ಎಂದು ಹೇಳಿರುವ ಜಾಗಕ್ಕೆ ಕರೆದುಕೊಂಡು ಹೋಗಲು ಪೊಲೀಸರು ಹೆದರಿಕೊಳ್ಳುತ್ತಿರುವುದನ್ನು ನೋಡಿದರೆ, ಆಘಾತವಾಗುತ್ತಿದೆ. ಅಲ್ಲಿ ಮೃತದೇಹ ಇದೆ ಎನ್ನುವುದನ್ನು ಇದು ಎಲ್ಲರೂ ನಂಬುವಂತೆ ಮಾಡಿದೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: