ಅಪ್ಪಳಿಸಿದೆ ಕೊರೊನಾ 2ನೇ ಅಲೆ | ಆಸ್ಪತ್ರೆಯ ಮುಂದೆ ಶವಗಳ ರಾಶಿ - Mahanayaka
10:32 PM Wednesday 15 - October 2025

ಅಪ್ಪಳಿಸಿದೆ ಕೊರೊನಾ 2ನೇ ಅಲೆ | ಆಸ್ಪತ್ರೆಯ ಮುಂದೆ ಶವಗಳ ರಾಶಿ

corona
13/04/2021

ಭೋಪಾಲ್: ದೇಶದಲ್ಲಿ ಎರಡನೇ ಬಾರಿಗೆ ಕೊವಿಡ್ 19 ಮರಣ ಮೃದಂಗ ಬಾರಿಸಲು ಆರಂಭಿಸಿದ್ದು, ರಾಯಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಶವಗಳ ರಾಶಿಯೇ ಪತ್ತೆಯಾಗಿದ್ದು, ಮೃತದೇಹಗಳನ್ನು ಇಡಲು ಸ್ಥಳವೇ ಇಲ್ಲದಂತಾಗಿದೆ.


Provided by

ದೇಶದಲ್ಲಿ ಆರೋಗ್ಯ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದ್ದು, ಛತ್ತೀಸ್ ಗಢದ ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇಡಲು ಕೂಡ ಜಾಗವಿಲ್ಲದ ಸ್ಥಿತಿ ನಿರ್ಮಾಣ ವಾಗಿದೆ. ಕೊರೊನಾದಿಂದ ಮೃತಪಟ್ಟವರ ಮೃತದೇಹಗಳನ್ನು ಶೈತ್ಯಾಗಾರದಲ್ಲಿಡಬೇಕು. ಆದರೆ ಶೈತ್ಯಾಗಾರಗಳು ತುಂಬಿರುವುದರಿಂದಾಗಿ ಮೃತದೇಹಗಳನ್ನು ಇಡಲು ಸ್ಥಳಾವಕಾಶವಿಲ್ಲದೇ, ಎಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲ, ಶವಗಳನ್ನು ಇಡಲಾಗುತ್ತಿದೆ. ಆಸ್ಪತ್ರೆಯ ಹೊರಗಡೆಯಲ್ಲಿ ಕೂಡ ಶವಗಳ ರಾಶಿ ಇದ್ದು, ಬಿಸಿಲಿನಲ್ಲಿ ಶವಗಳನ್ನಿಡಲಾಗಿದೆ ಎಂದು ವರದಿಯಾಗಿದೆ.

ಕೊವಿಡ್ 19 ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುವುದಕ್ಕಿಂತಲೂ ವೇಗವಾಗಿ  ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಒಂದೇ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸುತ್ತದೆ ಎಂದು ನಾವು ಊಹಿಸಿರಲಿಲ್ಲ. ಆಸ್ಪತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾವಿಗೀಡಾಗುವುದರಿಂದಾಗಿ ಕಡಿಮೆ ಸಾಮರ್ಥ್ಯದ ಶೈತ್ಯಾಗಾರ ವ್ಯವಸ್ಥೆ ಇದೆ.  10-20ರವರೆಗೆ ಆರಂಭದಲ್ಲಿ ಸಾವು ಆರಂಭವಾಯಿತು.  ಆದರೆ ಇದೀಗ 50-60ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಲು ಆರಂಭವಾಗಿದ್ದಾರೆ. ಇದರಿಂದಾಗಿ ಮೃತದೇಹಗಳನ್ನು ಇಡಲು ಕೂಡ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಯ್ ಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಧಿಕಾರಿ ಮೀರಾ ಬಘೇಲ್ ಹೇಳಿದ್ದಾರೆ.

ಯಾವುದೇ ರೋಗ ಲಕ್ಷಣ ಇಲ್ಲದವರು ಕೂಡ ಏಕಾಏಕಿ ತೀವ್ರ ಅಸ್ವಸ್ಥರಾಗಿ ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಕೊರೊನಾದ ಎರಡನೇ ಅಲೆಯ ಹೊಡೆಯವನ್ನು ಅಂದಾಜಿಸುವುದೇ ಕಷ್ಟಕರವಾಗಿದೆ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ