ನದಿ ಅಂದ್ರೆ ಕಾಂಗ್ರೆಸ್ಸಾ, ದಡ ಅಂದ್ರೆ ಬಿಜೆಪಿನಾ?: ಪಕ್ಷಾಂತರದ ಬಗ್ಗೆ ಶಾಸಕಿ ನಯನ ಮೋಟಮ್ಮ ಮಾತು

ಚಿಕ್ಕಮಗಳೂರು: ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ನಡುವೆ ದಲಿತ ಶಾಸಕಿ ಸ್ಫೋಟಕ ಹೇಳಿಕೆ ನೀಡಿದ್ದು, ಬಹಿರಂಗ ಸಭೆಯಲ್ಲಿ ಪಕ್ಷಾಂತರದ ಬಗ್ಗೆ ಶಾಸಕಿ ನಯನ ಮೋಟಮ್ಮ ಮಾತನಾಡಿದ್ದಾರೆ.
ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಇಲ್ಲಿಗೆ ಹಿಂದೂವಾಗಿ ಬಂದಿದ್ದೇನೆ, ಅದಕ್ಕೆ ಬೇರೆ ಬಣ್ಣ ಬೇಡ, ಯಾರೂ ಅನ್ಯತಾ ಭಾವಿಸಬೇಡಿ ಎಂದಿದ್ದಾರೆ.
ನಾನು ಬಿಜೆಪಿಗೆ ಹೋಗ್ತಿನೋ ಕಾಂಗ್ರೆಸ್ಸಿನಲ್ಲೇ ಉಳಿತಿನೋ, ಬಿಎಸ್ಪಿ, ಎಸ್ ಡಿಪಿಐಗೆ ಹೋಗ್ತೀನೋ ಆ ಪ್ರಶ್ನೆಗೆ ಮೂರು ವರ್ಷ ಕಾಯೋಣ, ಆದಾದ ಮೇಲೆ ನೋಡೋಣ, ಈಗ ಕಾಂಗ್ರೆಸ್ ಪಕ್ಷದ ಶಾಸಕಿಯಾಗಿ ಇಲ್ಲಿ ನಿಂತಿದ್ದೇನೆ. ಹಿಂದೂವಾಗಿ, ದಲಿತೆಯಾಗಿ ಮಹಿಳೆಯಾಗಿ ದೇವರು ಮೂಡಿಗೆರೆಯಲ್ಲಿ ಹುಟ್ಟಿಸಿದ್ದಾನೆ, ಆ ಅಸ್ತಿತ್ವದಿಂದ ಇಲ್ಲಿಗೆ ಬಂದಿದ್ದೇನೆ, ನಾನು ಶಾಸಕಿ ಪಕ್ಷ, ಪ್ರತಿನಿಧಿಸುವುದು ಆಮೇಲೆ ಜವಾಬ್ದಾರಿಯುತ ಸ್ಥಾನದಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದರು.
ನಾನು ಇಲ್ಲಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿರುವುದು ಗಣಪತಿಗಾಗಿ, ನನ್ನ ಧರ್ಮಕ್ಕಾಗಿ, ನನ್ನ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಇಲ್ಲಿಗೆ ಆಗಮಿಸಿದ್ದಾರೆ. ಯಾರಿಗೂ ಅನುಮಾನ ಬೇಡ ನದಿ ಅಂದ್ರೆ ಕಾಂಗ್ರೆಸ್, ದಡ ಅಂದ್ರೆ ಬಿಜೆಪಿನಾ ಅನ್ನುವ ಅನುಮಾನ ಬೇಡ ಎಂದರು.
ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಜೊತೆಗೆ ಶಾಸಕಿ ನಯನ ಮೋಟಮ್ಮ ವೇದಿಕೆ ಹಂಚಿಕೊಂಡರು. ಮೂಡಿಗೆರೆ ಪಟ್ಟಣದ ಅಡಂತ್ಯಾಯ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: