ಧರ್ಮಸ್ಥಳ ಕೇಸ್: ಮಾಧ್ಯಮ ನಿರ್ಬಂಧ ತೆರವು: ಪ್ರತಿಬಂಧಕ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹೂಳಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ಮಾಧ್ಯಮಗಳನ್ನು ನಿರ್ಬಂಧಿಸಿ, ಸಿಟಿ ಸಿವಿಲ್ ಕೋರ್ಟ್ ಹೆಚ್ಚುವರಿ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್‌ನ 10ನೇ ಹೆಚ್ಚುವರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಂಗಳೂರಿನ ಕೋಡಿಬೈಲ್ ವಿಳಾಸ ಹೊಂದಿರುವ ಯೂಟ್ಯೂಬ್ ಚಾನಲ್ ‘ಕುಡ್ಲ ರಾಂಪೇಜ್ ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ (32) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ. ಈ ಪ್ರಕರಣದಲ್ಲಿನ ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಅಂಶಗಳ ಮೇಲೆ ಈ ನ್ಯಾಯಪೀಠ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಪರಿಗಣಿಸಲಾದ ಪ್ರತಿಬಂಧಕ ಮನವಿಯ ಅಂಶವೊಂದನ್ನು ಹೊರತುಪಡಿಸಿ ಪಕ್ಷಗಾರರ ನಡುವಿನ ಎಲ್ಲಾ ವಾದಾಂಶಗಳನ್ನು ಮುಕ್ತವಾಗಿ ಇರಿಸಲಾಗಿದೆ. ಅದಾಗ್ಯೂ, ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು’ ಎಂದು ನ್ಯಾಯಪೀಠ ವಿಚಾರಣಾ ನ್ಯಾಯಾಲಯಕ್ಕೆ ತಾಕೀತು ಮಾಡಿದೆ.
‘ಹಕ್ಕುಸ್ವಾಮ್ಯ, ಟ್ರೇಡ್ ಮಾರ್ಕ್ ಗಳು, ಮಾಧ್ಯಮ ಸೋರಿಕೆಗಳು ಮತ್ತು ಪೈರಸಿಗೆ ಸಂಬಂಧಿಸಿದಂತೆ ಯಾರೊಬ್ಬರ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂಬ ಅರ್ಜಿದಾರರ ಆತಂಕದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ನ್ಯಾಯಾಲಯ ಈ ರೀತಿಯ ಪೂರ್ವಭಾವಿ ತಡೆ ಆದೇಶಗಳನ್ನು ನೀಡುತ್ತದೆ. ಆದರೆ, ಈ ಪ್ರಕರಣದಲ್ಲಿ, ವಿಚಾರಣೆಗಾಗಿಯೇ ನ್ಯಾಯಾಲಯ ಈ ಆದೇಶವನ್ನು ನೀಡಿರುವುದು ಸಮಂಜಸವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. “ಈ ಆದೇಶವು ಇತ್ತೀಚೆಗೆ ತನ್ನ ಬಲೆಯನ್ನು ಎಷ್ಟು ವ್ಯಾಪಕವಾಗಿ ಬೀಸಿದೆಯೆಂದರೆ, ವಾದಿ, ವಾದಿಯ ಕುಟುಂಬ ಅಥವಾ ಸ್ಥಳದ ವಿರುದ್ಧ ಯಾವುದೇ ಧ್ವನಿ ಎತ್ತುವುದನ್ನು ನ್ಯಾಯಾಂಗದ ವಿಚಾರಣಾ ಪರಿಧಿಗೆ ಸಿಲುಕಿಸುವ ಬೆದರಿಕೆಯಂತಾಗಿದೆ. ಹಾಲಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮಾನಹಾನಿಕರ ಹೇಳಿಕೆಗಳ ನಿಷೇಧದ ಬಗ್ಗೆ ಆದೇಶ ನೀಡಲಾಗಿದೆ ಎಂಬುದೇನೊ ಸರಿ. ಆದರೆ, ಯಾವ ರೀತಿಯ ಹೇಳಿಕೆಗಳು ಮಾನಹಾನಿಕರವಾಗಿವೆ ಎಂಬುದರ ಕುರಿತಾದ ಒಂದೇ ಒಂದು ಪದವೂ ಆದೇಶದಲ್ಲಿ ಕಂಡುಬರುವುದಿಲ್ಲ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
“ವಿಚಾರಣಾ ನ್ಯಾಯಾಲಯ ಏಕಪಕ್ಷೀಯವಾಗಿ ನೀಡಿರುವ ಈ ಮಧ್ಯಂತರ ತಡೆ ಆದೇಶವು, ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಕಾನೂನು ವ್ಯವಸ್ಥೆಯಲ್ಲಿ ಅಪರಿಚಿತ ಪ್ರತಿವಾದಿಗಳಿಗೆ ಬಳಸಲಾಗುವ ಜನಪ್ರಿಯ ಜಾನ್ ಡೋ ಆದೇಶವಾಗಿದೆ. ಭಾರತೀಯ ವ್ಯವಸ್ಥೆಯಲ್ಲೂ ಇದು ಅಶೋಕ್ ಕುಮಾರ್ ಪ್ರಕರಣದಲ್ಲಿ ಸ್ಥಳೀಯ ಅದೇಶವಾಗಿ ರೂಪಾಂತರಗೊಂಡಿದೆ’ ಎಂಬ ಅಂಶವನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ‘ಜಾನ್ ಡೋ ಆದೇಶದ ಪರಿಕಲ್ಪನೆ ಭಾರತೀಯ ನ್ಯಾಯಶಾಸ್ತ್ರದಲ್ಲಿ ಮನ್ನಣೆ ಪಡೆದುಕೊಂಡಿದೆಯಾದರೂ, ಇದನ್ನು ಹೆಚ್ಚಿನ ಕಾಳಜಿ ಮತ್ತು ವಿವೇಚನಾಯುಕ್ತ ದೂರದೃಷ್ಟಿಯಿಂದ ಬಳಸಬೇಕು. ಇಂತಹ ಆದೇಶಗಳು, ಸ್ವಭಾವತಃ ಗುರುತಿಸಲಾಗದ ವ್ಯಕ್ತಿಗಳಿಗೆ ವಿಸ್ತರಿಸುತ್ತವೆ ಮತ್ತು ಅತಿಯಾದ ಅಪಾಯವನ್ನು ಹೊಂದಿರುತ್ತವೆ ಎಂಬುದನ್ನು ಸದಾ ನೆನಪಿಟ್ಟುಕೊಂಡಿರಬೇಕು’ ಎಂದು ನ್ಯಾಯಪೀಠ ವಿಶ್ಲೇಷಿಸಿದೆ ಎಂದು ವರದಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD