ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ: ಗಂಭೀರ ಗಾಯ - Mahanayaka

ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ: ಗಂಭೀರ ಗಾಯ

06/08/2025


Provided by

ಮೂಡಿಗೆರೆ: ಪಟ್ಟಣ ಸಮೀಪದ ಮುತ್ತಿಗೆಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಕಾಡಾನೆ ದಾಳಿಯಲ್ಲಿ ಸ್ಥಳೀಯ ವ್ಯಕ್ತಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.

63 ವರ್ಷದ ಫಿಲಿಪ್ ಎಂಬ ವ್ಯಕ್ತಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ. ಮಧ್ಯ ರಾತ್ರಿ ವೇಳೆ ಮನೆಯ ಸಮೀಪ ನಾಯಿ ಬೊಗಳಿದಾಗ ಮನೆ ಸಮೀಪ ಏನೋ ಶಬ್ದವಾಗುತ್ತಿರುವುದನ್ನು ಗಮನಿಸಿ ಜಾನುವಾರುಗಳು ಬಂದಿರಬಹುದು ಎಂದು ಮನೆಯ ಹೊರಗೆ ಬಂದಿದ್ದಾರೆ.  ಮನೆಯಿಂದ ಹೊರಬಂದ ವೇಳೆ  ಮನೆಯ ಸಮೀಪವೆ ಬಂದಿದ್ದ ಕಾಡಾನೆ ಏಕಾಏಕಿ ಫಿಲಿಪ್ ಅವರ ಮೇಲೆ ದಾಳಿ ನಡೆಸಿದೆ. ಕಾಡಾನೆ ಸೊಂಡಿಲಿನಿಂದ ಫಿಲಿಪ್ ಅವರನ್ನು ತೆಗೆದು ಎಸೆದಿದೆ. ಆನೆ ದಾಳಿಯಿಂದ ಕಾಲು, ಎದೆ ಹಾಗೂ ಕೈಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಿಲಿಪ್ ಕ್ಯಾಸ್ಟೋಲಿನಾ ಅವರು ಮುತ್ತಿಗೆಪುರ ನಿವಾಸಿಯಾಗಿದ್ದು, ಟ್ರಾಕ್ಟರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ತನ್ನ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ. ಇದೀಗ ಅವರು ತೀವ್ರ ಗಾಯಗೊಂಡಿದ್ದು ಮುಂದಿನ ದಿನಗಳಲ್ಲಿ ದುಡಿದು ತಿನ್ನುವುದಕ್ಕೆ ಕಷ್ಟವಾಗಿದೆ. ಆನೆ ದಾಳಿಯಿಂದ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ ಕೆಲವು ವಾರಗಳಿಂದ ಸುಮಾರು 35 ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಅವು ನಿರಂತರವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ತಾಲ್ಲೂಕಿನ ಮಾಕೋನಹಳ್ಳಿ, ಕಾರಬೈಲ್, ದುಂಡುಗ, ಹಳಸೆ, ಮುತ್ತಿಗೆಪುರ ಗ್ರಾಮಗಳ ಸುತ್ತಾ ಸಂಚರಿಸುತ್ತಾ ತೀವ್ರ ಉಪಟಳ ನೀಡುತ್ತಿವೆ. ಜನರ ನೋವುಗಳನ್ನು ಕೇಳುವವರು ಇಲ್ಲದಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ, ಮಧ್ಯರಾತ್ರಿ ಹೊತ್ತಿಗೆ ಮೂಡಿಗೆರೆ ಅರಣ್ಯ ಅಧಿಕಾರಿ ಕಾವ್ಯ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪ್ರಸ್ತುತ ಕಾಡಾನೆಗಳು ಕುನ್ನಹಳ್ಳಿ ಹಳಸೆ ಭಾಗದಲ್ಲಿ ಬೀಡುಬಿಟ್ಟಿದ್ದು, ಕಾಫಿ ತೋಟ, ಶುಂಠಿ ಗದ್ದೆಗಳಿಗೆ ಲಗ್ಗೆ ಇಟ್ಟಿವೆ. ಕುನ್ನಹಳ್ಳಿ ಚಂದ್ರಶೇಖರ್ ಎಂಬುವವರ ಗದ್ದೆಯಲ್ಲಿ ನಾಟಿ ಮಾಡಿದ್ದ ಶುಂಠಿ ಬೆಳೆಯನ್ನು ಸಂಪೂರ್ಣ ತುಳಿದು ನಾಶಮಾಡಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ