ಇವಿಎಂ ವಿರುದ್ಧ ಹೋರಾಡಿ 3 ವರ್ಷಗಳ ನಂತರ ಗೆದ್ದ ಅಭ್ಯರ್ಥಿ: ಮರು ಎಣಿಕೆಯಲ್ಲಿ ಸಿಕ್ತು ಗೆಲುವು!

ಹರ್ಯಾಣ: ಇವಿಎಂ ಮತಗಳ ಮರು ಎಣಿಕೆಯಲ್ಲಿ ಸುದೀರ್ಘ ಕಾನೂನು ಹೋರಾಟಗಳ ನಂತರ ವ್ಯಕ್ತಿಯೊಬ್ಬರು ಸರಪಂಚರಾಗಿ ಗೆದ್ದು ಚುನಾವಣಾ ಅಕ್ರಮವನ್ನು ಬಹಿರಂಗಗೊಳಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ನವೆಂಬರ್ 2, 2022ರಂದು ಹರ್ಯಾಣದಲ್ಲಿ ಪಂಚಾಯತ್ ಚುನಾವಣೆ ನಡೆಸಲಾಗಿತ್ತು. ಬುವಾನಾ ಲಖು ಸರಪಂಚ್ ಹುದ್ದೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಮೋಹಿತ್ ಕುಮಾರ್ ಹಾಗೂ ಕುಲದೀಪ್ ಸಿಂಗ್ ಎಂಬವರ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು.
ಚುನಾವಣಾ ಫಲಿತಾಂಶದಲ್ಲಿ ಕುಲದೀಪ್ ಸಿಂಗ್ ಅವರನ್ನು ವಿಜೇತರು ಎಂದು ಘೋಷಿಸಲಾಗಿತ್ತು. ಆದರೆ ಬೂತ್ ಸಂಖ್ಯೆ 69ರ ಅಧ್ಯಕ್ಷರು ಸಿಂಗ್ ಹೆಸರಿನಲ್ಲಿ ತಪ್ಪಾಗಿ ಮತಗಳನ್ನು ದಾಖಲಿಸಿದ್ದಾರೆ ಎಂದು ಪ್ರತಿಸ್ಪರ್ಧಿ ಮೋಹಿತ್ ಕುಮಾರ್ ಪ್ರಶ್ನಿಸಿ ಕಾನೂನು ಸಮರ ಆರಂಭಿಸಿದರು. ಸುಪ್ರೀಂ ಕೋರ್ಟ್ ವರೆಗೂ ಸುದೀರ್ಘ ಹೋರಾಟ ನಡೆಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಇದೀಗ ಮರು ಎಣಿಕೆಯಾಗಿದ್ದು, 51 ಮತಗಳ ಅಂತರದಲ್ಲಿ ಮೋಹಿತ್ ಕುಮಾರ್ ಗೆಲುವು ದಾಖಲಿಸಿದ್ದು, ಪಾಣಿಪತ್‌ನ ಬುವಾನಾ ಲಖು ಗ್ರಾಮದ ಸರಪಂಚರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಅಪರೂಪದ ಇವಿಎಂಗಳ ಮರುಎಣಿಕೆಯು ಅಂತಿಮವಾಗಿ 2022 ರ ಫಲಿತಾಂಶವನ್ನು ರದ್ದುಗೊಳಿಸಲು ಕಾರಣವಾಯಿತು.
ಒಂದೆಡೆ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷ ವ್ಯಾಪಕವಾಗಿ ಹೋರಾಟ ಆರಂಭಿಸಿದೆ. ಈ ನಡುವೆ ಮೋಹಿತ್ ಕುಮಾರ್ ಅವರು ನ್ಯಾಯಾಲಯದಲ್ಲಿ ಪಡೆದ ಗೆಲುವು ಹೊಸ ಅಲೆಯನ್ನು ಎಬ್ಬಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD