ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಒತ್ತಾಯ ಮಾಡಿ ಪೇಚಿಗೆ ಸಿಲುಕಿದ ಬಿಜೆಪಿ: ಹೇಳಿಕೆ ನೀಡಿದ್ದು ಹರೀಶ್ ಪೂಂಜಾ?

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ತಿಮರೋಡಿ ಮಹೇಶ್ ಶೆಟ್ಟಿಯ ಬಂಧನಕ್ಕಾಗಿ ವಿಪಕ್ಷ ಬಿಜೆಪಿ ಸದಸ್ಯರು ವಿಧಾನ ಸಭೆಯಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಅಂತ ತಿಮರೋಡಿ ಹೇಳಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಒತ್ತಡ ಹೇರಿದ್ದಾರೆ.
ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಮಾಡಿದ ಅಪಮಾನ ಅಂತ ಆರೋಪ ಮಾಡಿದರಲ್ಲದೇ ಧರ್ಮಸ್ಥಳದ ಬಗ್ಗೆ ಆರೋಪ ಮಾಡಿದ ಕೂಡಲೇ ಎಸ್ ಐಟಿ ರಚನೆ ಮಾಡಿದ ಸರ್ಕಾರ ಸಿಎಂ ವಿಚಾರಕ್ಕೂ ಎಸ್ ಐಟಿ ತನಿಖೆ ಮಾಡುತ್ತಾ ಎಂದು ಪ್ರಶ್ನಿಸಿದರು.
ಇದಕ್ಕೆ ಬಿಜೆಪಿ ಸದಸ್ಯ ಸುರೇಶ್ ಹಾಗೂ ಇತರರ ಧ್ವನಿಗೂಡಿಸಿದರಲ್ಲದೇ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್ ತಿಮರೋಡಿ ವಿರುದ್ಧ ಹತ್ತಾರು ಕೇಸ್ ದಾಖಲು ಮಾಡಲಾಗಿದೆ. ಆತನ ಹೇಳಿಕೆಗೆ ಸಂಬಂಧಿಸಿದಂತೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹರೀಶ್ ಪೂಂಜಾ ಬಂಧನಕ್ಕೆ ತಿಮರೋಡಿ ಒತ್ತಾಯ:
ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎನ್ನುವುದು ನನ್ನ ಹೇಳಿಕೆಯಲ್ಲ, ಅದು ಶಾಸಕ ಹರೀಶ್ ಪೂಂಜಾ ಅವರು ನೀಡಿರುವ ಹೇಳಿಕೆ. ಅವರು ಹೇಳಿರುವುದನ್ನು ನಾನು ಪುನರುಚ್ಛರಿಸಿದ್ದೆ ಅಷ್ಟೇ. 2023ರಲ್ಲಿ ಮಾತನಾಡಿರುವ ಸ್ಟೇಟ್ ಮೆಂಟ್ ಇದು. ಈ ಸ್ಪೇಟ್ ಮೆಂಟ್ ನ್ನು ಹರೀಶ್ ಪೂಂಜಾ ನೀಡಿರುವುದು. ಸತ್ಯಜಿತ್ ಸುರತ್ಕಲ್ ಅವರನ್ನು ಪ್ರಶ್ನೆ ಮಾಡಿದ್ದ ಹರೀಶ್ ಪೂಂಜಾ ಸತ್ಯಣ್ಣ ನೀವು ಹಿಂದೂ ಸಂಘಟನೆಯಲ್ಲಿದ್ದವರು, ನೀವೀಗ ಕಾಂಗ್ರೆಸ್ ನ ಪರವಾಗಿ ಪ್ರಚಾರ ಮಾಡ್ತಿದ್ದೀರಿ…ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ 24 ಮಂದಿಯನ್ನು ಕೊಲೆ ಮಾಡಿದ ಸಿದ್ದರಾಮಯ್ಯ ಜೊತೆಗೆ ಹಿಂದೂ ನಾಯಕರು ಹೇಗೆ ಹೋಗಿ ಕೆಲಸ ಮಾಡುತ್ತಿದ್ದೀರಿ ಅಂತ ಹರೀಶ್ ಪೂಂಜಾ ಹೇಳಿದ್ದರು. ಆ ಸಂದರ್ಭದಲ್ಲಿ ವಸಂತ ಬಂಗೇರನವರು, ಇದನ್ನು ಪ್ರಶ್ನೆ ಮಾಡುವಂತೆ ನನಗೆ ಹೇಳಿದರು. ಹೀಗಾಗಿ ನಾನು ಇದಕ್ಕೆ ಸಿದ್ದರಾಮಯ್ಯನವರು ಉತ್ತರ ಕೊಡಬೇಕು, ಹರೀಶ್ ಪೂಂಜಾ ಅವರನ್ನು ಶಾಸಕ ಸ್ಥಾನದಿಂದ ತಲೆದಂಡ ಮಾಡಬೇಕು ಎಂದು ನಾನು ಪ್ರಶ್ನೆ ಮಾಡಿದ್ದೆ ಎಂದು ಮಹೇಶ್ ಶೆಟ್ಟಿ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD