ಒಬ್ಬ ಮಾಜಿ ಸಂಸದನಿಗೆ ಸಂವಿಧಾನ ಗೊತ್ತಿಲ್ಲ, ಅವನನ್ನು ಮೂರ್ಖ ಅಂತ ಕರೆಯಬೇಕು: ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(PIL) ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟ ಹತ್ತಬಾರದು ಅಂತಾರೆ. ಪೂಜೆ ಮಾಡಬಾರದು ಅಂತಾರೆ. ನನಗೆ ಅರ್ಥ ಆಗುತ್ತಿಲ್ಲ. ನಾವು ಜಾತ್ಯಾತೀತ ವ್ಯವಸ್ಥೆಯಲ್ಲಿ ಇದ್ದೇವೆ. ಸಂವಿಧಾನ ಸಮಾನತೆ ಅಂತ ಹೇಳುತ್ತದೆ. ಅಂಬೇಡ್ಕರ್ ಇದನ್ನೇ ಹೇಳಿದ್ದಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನ ಸಮಾಜ ಖಂಡಿಸಬೇಕು ಎಂದು ಪ್ರತಾಪ್ ಸಿಂಹ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಒಬ್ಬ ಮಾಜಿ ಸಂಸದನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು? ಅವನನ್ನು ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ನ ದೇಶದಲ್ಲಿ ಇದ್ದಾರೆ. ಇಂತಹ ಮೂರ್ಖರ ಬಗ್ಗೆ ಮಾತಾಡೋದು ಬೇಡ. ರಾಜಕೀಯ ಬೇರೆ ವಿಷಯದಲ್ಲಿ ಮಾಡಲಿ. ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು. ಜನರನ್ನ ತಪ್ಪು ದಾರಿಗೆ ಎಳೆಯೋದು ಖಂಡನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಜಾಸ್ತಿ ಆಗುತ್ತಿದೆ. ಇದು ನೋವಿನ ಸಂಗತಿ ಎಂದರು.
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ವ್ಯವಸ್ಥೆಯಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಿದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD