ಹಳೆ ಬಂದರು ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಡಿವೈಎಫ್ ಐ, ಶ್ರಮಿಕರ ಸಂಘದಿಂದ ಪ್ರತಿಭಟನೆ - Mahanayaka
4:08 PM Thursday 16 - October 2025

ಹಳೆ ಬಂದರು ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಡಿವೈಎಫ್ ಐ, ಶ್ರಮಿಕರ ಸಂಘದಿಂದ ಪ್ರತಿಭಟನೆ

dyfi
16/10/2025

ಮಂಗಳೂರು : ಹಳೇಬಂದರು ಸಗಟು ಮಾರುಕಟ್ಟೆ ಹಮಾಲಿ ಕಾರ್ಮಿಕರು ಮೀನುಗಾರಿಕಾ ಧಕ್ಕೆಯಲ್ಲಿ  ದುಡಿಯುವ ಕಾರ್ಮಿಕರು ಸರಕು ಸಾಗಾಟ ಲಾರಿ, ಟೆಂಪೋ ಚಾಲಕರು  ಮೀನುಗಾರರು ಅತ್ಯಧಿಕ ಸಂಖ್ಯೆಯಲ್ಲಿ ಇರುವ ಬಂದರು ಪ್ರದೇಶದಲ್ಲಿ ಆದ್ಯತೆಯಲ್ಲಿ ನಿರ್ಮಿಸಿಕೊಡಬೇಕಿದ್ದ ಇಂದಿರಾ ಕ್ಯಾಂಟೀನನ್ನು ತೆರೆಯದೆ ನಿರ್ಲಕ್ಷ್ಯ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ, ಕೂಡಲೇ ಇಂದಿರಾ ಕ್ಯಾಂಟೀನ್ ಸೇವೆ ಆರಂಭಿಸಲು ಒತ್ತಾಯಿಸಿ ಇಂದು ಹಳೆ ಬಂದರು ಹಳೆ ಮುನ್ಸಿಪಲ್ ಕಚೇರಿ ಬಳಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಎದುರು ಬಂದರು ಶ್ರಮಿಕರ ಸಂಘ ಮತ್ತು ಡಿವೈಎಫ್ ಐ ಬಂದರು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


Provided by

ಡಿವೈಎಫ್ ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷರೂ ಆಗಿರುವ ಬಿ.ಕೆ.ಇಮ್ತಿಯಾಜ್ ಪ್ರತಿಭಟನೆ ಉದ್ಧೇಶಿಸಿ ಮಾತನಾಡುತ್ತಾ, ನಗರದ ಆರ್ಥಿಕತೆಗೆ ಜನ್ಮ ಕೊಟ್ಟ ಬಂದರು ಪ್ರದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ, ಬಂದರಿನ ಕಾರ್ಮಿಕರ ಶ್ರಮದಿಂದ ನಗರ ಅಭಿವೃದ್ಧಿ ಆಗಿದೆ ಆದರೆ ಹಳೆ ಬಂದರಿನ ಕಾರ್ಮಿಕರಿಗೆ ಆದ್ಯತೆಯಲ್ಲಿ ಆರಂಭಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿಸಿ ವರ್ಷಗಳು ಕಳೆದರೂ ತೆರೆಯದೆ ಬಡವರಿಗೆ ಅನ್ಯಾಯ ಮಾಡಲಾಗಿದೆ, ದುಬಾರಿ ಹೋಟೆಲ್ ಆಹಾರ ಖರೀದಿಸಲು ಸಾಧ್ಯವಿಲ್ಲದ ಕಾರ್ಮಿಕರ ಹಸಿವು ತಣಿಸಲು ಕೂಡಲೇ ಇಂದಿರಾ ಕ್ಯಾಂಟೀನ್ ತೆರೆಯ ಬೇಕೆಂದು ಆಗ್ರಹಿಸಿದರು.

ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಕೇರಳದ ಮಾವೇಲಿ ಹೋಟೆಲ್, ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ  ಕರ್ನಾಟಕದಲ್ಲೂ ಬಡವರಿಗೆ ರಿಯಾಯಿತಿ ದರದ ಸರಕಾರಿ ಕ್ಯಾಂಟೀನ್ ಆರಂಭಿಸಲು ದಶಕಗಳ ಹಿಂದೆ ಡಿವೈಎಫ್ ಐನ ಹೋರಾಟದ ಪ್ರತಿಫಲವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸಿತ್ತು ಆದರೆ ಮಂಗಳೂರಿನಲ್ಲಿ ಅಗತ್ಯ ಇರುವ ಬಂದರು ಪ್ರದೇಶದಲ್ಲಿ ಆರಂಭಿಸದೆ ನಿರ್ಲಕ್ಷ್ಯ ಮಾಡಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ  ಬಂದರು ಶ್ರಮಿಕರ ಸಂಘದ ಪ್ರಮುಖರಾದ ಫಾರೂಕ್ ಉಳ್ಳಾಲಬೈಲ್, ಶಮೀರ್ ಬೋಳಿಯಾರ್, ಮಾಧವ ಕಾವೂರು, ಮೋಹನ ಕುಂಪಲ, ಹರೀಶ್ ಕೆರೆಬೈಲ್, ಅಕ್ಬರ್, ಶರೀಫ್ ಕುಪ್ಪೆಪದವು, ಹಕೀಮ್ ಬೆಂಗ್ರೆ, ಇಮ್ರಾನ್, ಯು.ಪಿ ಅಬ್ಬಾಸ್, ಹನೀಫ್, ಡಿವೈಎಫ್ಐ ಮುಖಂಡರಾದ ತಯ್ಯೋಬ್ ಬೆಂಗ್ರೆ, ಅಶ್ರಫ್ ಬಂದರ್,ನೌಶಾದ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಕೊಲ್ನಾಡ್,ಕಾದರ್ ಅದ್ಯಪಾಡಿ, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡ ಅನ್ಸಾರ್ ಬಜಾಲ್, ಟೆಂಪೋ ಚಾಲಕರ ಸಂಘದ ಮುಖಂಡ ನಿಸಾರ್ ಬೆಂಗ್ರೆ ಮುಂತಾದವರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ