ಚಿಕ್ಕಮಗಳೂರು: ಹೋಂ ಸ್ಟೇಯಲ್ಲಿ ಸ್ನೇಹಿತೆ ಜೊತೆ ತಂಗಿದ್ದ ಯುವತಿ ಬಾತ್ ರೂಮ್ ನಲ್ಲಿ ಕುಸಿದು ಬಿದ್ದು ಸಾವು! - Mahanayaka

ಚಿಕ್ಕಮಗಳೂರು: ಹೋಂ ಸ್ಟೇಯಲ್ಲಿ ಸ್ನೇಹಿತೆ ಜೊತೆ ತಂಗಿದ್ದ ಯುವತಿ ಬಾತ್ ರೂಮ್ ನಲ್ಲಿ ಕುಸಿದು ಬಿದ್ದು ಸಾವು!

ranjitha
26/10/2025

ಚಿಕ್ಕಮಗಳೂರು: ಹೋಂ ಸ್ಟೇ ಒಂದರಲ್ಲಿ ತಂಗಿದ್ದ ಯುವತಿ ಸ್ನಾನದ ಗೃಹದಲ್ಲಿ ಕುಸಿದು ಬಿದ್ದು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕು ಹಾಂದಿ ಗ್ರಾಮದ ಹಿಪ್ಲ(Hippla) ಎಂಬ ಹೆಸರಿನ ಹೋಂ ಸ್ಟೇನಲ್ಲಿ ಶನಿವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.

ಬೇಲೂರು ತಾಲ್ಲೂಕು ದೇವಲಾಪುರ ಮೂಲದ ದೇವರಾಜುಗೌಡ ಎಂಬುವವರ ಪುತ್ರಿ ರಂಜಿತಾ(27 ವರ್ಷ) ಮೃತಪಟ್ಟ ಯುವತಿ. ಇವರ ಸಹೋದರ ಶರತ್ ಮೂಡಿಗೆರೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯ ರವಿ ಕ್ಯಾಂಟೀನ್ ಪಕ್ಕ  ಬೇಕರಿ ನಡೆಸುತ್ತಿದ್ದು, ಇವರ ಕುಟುಂಬ ಮೂಡಿಗೆರೆ ಪಟ್ಟಣದಲ್ಲಿಯೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ತನ್ನ ಗೆಳತಿ ದಾವಣಗೆರೆ ಮೂಲದ ರೇಖಾ ಎಂಬುವವರೊಂದಿಗೆ ಶುಕ್ರವಾರ ಹಿಪ್ಲ ಹೋಂ ಸ್ಟೇ ನಲ್ಲಿ ತಂಗಿದ್ದ ರಂಜಿತಾ ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆಯ ಸಮಯದಲ್ಲಿ ಸ್ನಾನದ ಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರೇಖಾ ಎಂ ಎಸ್ಸಿ ಪದವೀದರೆಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ಸ್ನೇಹಿತೆಯೊಬ್ಬರ ಎಂಗೇಜ್ ಮೆಂಟ್ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ನಿಗದಿಯಾಗಿತ್ತು, ಎಂಗೇಜ್ ಮೆಂಟ್ ಗೆ ತೆರಳಲು ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದಿದ್ದರು, ಶುಕ್ರವಾರ ಮೂಡಿಗೆರೆಯಲ್ಲಿಯೇ ಇದ್ದು ಸಂಜೆ ಹಾಂದಿ ಸಮೀಪದ ಹೋಂ ಸ್ಟೇನಲ್ಲಿ ತಂಗಿದ್ದರು ಎನ್ನಲಾಗಿದೆ.

ಜೊತೆಯಲ್ಲಿದ್ದ ಸ್ನೇಹಿತೆ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ತಡರಾತ್ರಿವರೆಗೆ ರಂಜಿತಾ ಕಂಪ್ಯೂಟರ್ ನಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡಿದ್ದರು.  ಶನಿವಾರ ಬೆಳಿಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆಂದು ತೆರಳಿದ್ದರು. ತುಂಬಾ ಹೊತ್ತಾದರೂ ಸ್ನಾನಗೃಹದಿಂದ ಹೊರಬಂದಿಲ್ಲ, ಜೊತೆಗೆ ನಲ್ಲಿಯಿಂದ ನೀರು ಹೋಗುತ್ತಿರುವ ಶಬ್ಧ ಕೇಳುತ್ತಲೇ ಇತ್ತು, ಬಾಗಿಲೂ ಬಡಿದರು ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ರೇಖಾ ಟೇಬಲ್ ಇಟ್ಟು ಕಿಟಕಿಯ ಮೂಲಕ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಹೋಂ ಸ್ಟೇ ಸಿಬ್ಬಂದಿಗೆ ಮಾಹಿತಿ ನೀಡಿ, ಬಾಗಿಲು ಒಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜಿತಾ ಜೀವ ಇರಬಹುದು ಎಂದು ತಕ್ಷಣ ಮೂಡಿಗೆರೆ ಹೊಯ್ಸಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿ ಮೃತಪಟ್ಟಿರುವುದಾಗಿ ಹೇಳಿದ್ದು ನಂತರ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ರವಾನಿಸಿದ್ದಾರೆ.

ರಂಜಿತಾ ಸಾವಿಗೆ ಕಾರಣವೇನು ಎಂಬುದು ನಿಗೂಢವಾಗಿದೆ, ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದು ಗೀಸರ್ ಸೋರಿಕೆಯಿಂದ ಸಾವನ್ನಪ್ಪಿರಬಹುದಾ ? ಎಂಬ ಶಂಕೆ ಇದೆ. ಆದರೆ ಪೊಲೀಸ್ ಮೂಲಗಳ ಪ್ರಕಾರ ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಇದ್ದು, ಜೊತೆಗೆ ಗ್ಯಾಸ್ ಸೋರಿಕೆಯಾಗಿರುವ ಯಾವ ಕುರುಹುಗಳು ಕಂಡುಬಂದಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ ? ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕು. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ. ಆಲ್ದೂರು ಠಾಣಾಧಿಕಾರಿ ರವಿಯವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ರಂಜಿತಾ ಅವಿವಾಹಿತೆಯಾಗಿದ್ದು, ಕುಟುಂಬದವರು ಮಗಳ ಮದುವೆಗೆ ಸಂಬಂಧ ಹುಡುಕುತ್ತಿದ್ದರು, ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು. ಮಗಳ ಸಾವಿನಿಂದ ಕುಟುಂಬದವರು ಮತ್ತು ಬಂಧುಗಳ ರೋಧನ ಮುಗಿಲು ಮುಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ