ಮಂಗಳೂರು | ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜ್ಪೆವರೆಗಿನ ರಸ್ತೆ ಅದ್ವಾನ: ದುರಸ್ತಿಗೆ 15 ದಿನಗಳ ಗಡುವು ನೀಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜ್ಜೆಯವರೆಗಿನ ರಾಜ್ಯ ಹೆದ್ದಾರಿಯು ಹೊಂಡ ಗುಂಡಿಗಳಿಂದ ಕೂಡಿದ್ದು, ಡಾಂಬರು ಕಳಚಿ ಹೋಗಿ ತೀವ್ರ ಹದಗೆಟ್ಟಿದೆ. ಕಳಪೆ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ ದ.ಕ.ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿ ಒತ್ತಾಯಿಸಿದೆ.
ಗುರುವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಸಮಿತಿಯ ಮುಖಂಡರು, ಮಂಗಳೂರು—ಕಾವೂರು–ಬಜ್ಜೆ–ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಜನ ಸಾಮಾನ್ಯರು, ಕೂಲಿಕಾರ್ಮಿಕರು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಧಾರ್ಮಿಕ ಕ್ಷೇತ್ರಗಳು, ಖಾಸಗಿ ನೌಕರರು ಹಾಗೂ ಸರಕಾರಿ ನೌಕರರಿಗೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬೇರೆ ಬೇರೆ ಕಡೆಗಳಿಗೆ ಪ್ರಯಾಣಿಸಲು ಇರುವ ಏಕೈಕ ನೇರ ಸಂಪರ್ಕ ರಸ್ತೆಯಾಗಿದೆ. ಮುಲ್ಕಿ–ಬೆಳ್ಳಣ್ ಭಾಗಗಳಿಂದಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಈ ರಾಜ್ಯ ಹೆದ್ದಾರಿಯೇ ಅತೀ ಸುಲಭದ ರಸ್ತೆಯಾಗಿದೆ. ಅಲ್ಲದೆ ಮಂಗಳೂರು ಭಾಗದಿಂದ ಕಟೀಲು ಸಂಪರ್ಕಿಸುವ ಪ್ರಮುಖ ರಸ್ತೆಯಾದುದರಿಂದ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ದ್ವಿಚಕ್ರ, ತ್ರಿಚಕ್ರ, ಲಘು ಹಾಗೂ ಘನ ವಾಹನಗಳು ಸಂಚರಿಸುತ್ತಿವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಾಜ್ಯ ಹೆದ್ದಾರಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಬಜ್ಜೆಯವರೆಗಿನ ರಸ್ತೆಯು ಇತ್ತೀಚಿನ ಭಾರೀ ಮಳೆಯಿಂದಾಗಿ ಡಾಂಬರು ಸಂಪೂರ್ಣವಾಗಿ ಕಳಚಿ ಹೋಗಿ ರಸ್ತೆ ತುಂಬಾ ದೊಡ್ಡ ದೊಡ್ಡ ಅಪಾಯಕಾರಿ ಹೊಂಡ–ಗುಂಡಿಗಳು ನಿರ್ಮಾಣವಾಗಿದೆ ಎಂದರು.
ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ತಮ್ಮ ವಾಹನಗಳಲ್ಲಿ ಪ್ರಯಾಣಿಸುವುದೇ ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ಅಪಾಯಕಾರಿ ಗುಂಡಿ ತಪ್ಪಿಸಲು ಹೋಗಿ ತಮ್ಮ ವಾಹನ ಸಮೇತ ರಸ್ತೆ ಗುಂಡಿಗೆ ಬಿದ್ದು, ತೀವ್ರವಾಗಿ ಗಾಯಗೊಂಡಿರುವ ಬಗ್ಗೆಯೂ ವರದಿಯಾಗಿದೆ. ಅಲ್ಲದೆ ಮುಂದೆಯೂ ಇಂತಹ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿವೆ. ಡಾಂಬರು ಕಳಚಿ ತೀವ್ರ ಹದಗೆಟ್ಟು ಹೊಂಡ ಗುಂಡಿಗಳಿಂದ ತುಂಬಿರುವ ಮಂಗಳೂರು ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜ್ಜೆಯವರೆಗಿನ ರಾಜ್ಯ ಹೆದ್ದಾರಿಯನ್ನು ಸಂಬಂಧಪಟ್ಟ ಇಲಾಖೆಯು 15 ದಿನದ ಒಳಗೆ ದುರಸ್ತಿಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.
ಹದಗೆಟ್ಟಿರುವ ಕಳಪೆ ರಸ್ತೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. 15 ದಿನಗಳೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ದ.ಕ ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿಯು ಬೀದಿಗಿಳಿದು ಪ್ರತಿಭಟಿಸುವುದು ಅನಿವಾರ್ಯವಾದೀತು ಎಂದು ಅವರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಕೃಷ್ಣಾನಂದ ಡಿ., ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ, ಖಜಾಂಚಿ ರುಕ್ಕಯ್ಯ ಅಮೀನ್ ಕರಂಬಾರು, ತಾಲೂಕು ಸಂಘಟನಾ ಸಂಚಾಲಕಿಯರಾದ ಪೂರ್ಣಿಮಾ ಮುಲ್ಲೊಟ್ಟು, ಗೀತಾ ಕರಂಬಾರು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























