ಸರ್ವೇ ನಡೆಯುತ್ತಿದ್ದ ಸ್ಥಳಕ್ಕೆ ಬಂದ ದೈವ: ಕಾಂತಾರವನ್ನೂ ಮೀರಿಸಿದ ಜಮೀನು ಗಲಾಟೆ!
ಚಿಕ್ಕಮಗಳೂರು: ಜಮೀನು ಸರ್ವೇ ಮಾಡುತ್ತಿದ್ದ ವೇಳೆ ಏಕಾಏಕಿ ಕೈಯಲ್ಲಿ ದೊಂದಿ(ಬೆಂಕಿ) ಹಿಡಿದುಕೊಂಡು ಬಂದ ದೈವ ಅಬ್ಬರಿಸುತ್ತಾ, ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿತು….! ಇದ್ಯಾವುದೋ ಕಾಂತಾರ ಸಿನಿಮಾದ ಸ್ಟೋರಿ ಅಲ್ಲ, ಇಲ್ಲೊಬ್ಬ ಕಾಂತಾರವನ್ನೂ ಮೀರಿಸಿದ ಅಭಿನಯ ಮಾಡಿದ್ದು, ದೈವದಂತೆ ಅಬ್ಬರಿಸುತ್ತಾ ಓಡಿ ಬಂದು ತನ್ನ ತಮ್ಮನ ಹೆಂಡತಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೈವ ಬಂದಂತೆ ನಟಿಸಿ ಮಹಿಳೆಗೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಹಲ್ಲೆಗೊಳಗಾದ ಮಹಿಳೆ ರಮ್ಯಾ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆಯ ವಿವರ:
ಅಣ್ಣ ತಮ್ಮಂದಿರ ನಡುವೆ ಜಮೀನಿನ ವಿವಾದವಿತ್ತು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಅಣ್ಣ ಸುರೇಶ್ ಮತ್ತು ಆತನ ತಮ್ಮ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ JMFC ಕೋರ್ಟ್ ನಿಂದ ಸರ್ವೆ ನಡೆಸುವಂತೆ ಆದೇಶ ಬಂದಿತ್ತು. ಕೋರ್ಟ್ ಆದೇಶದಂತೆ ಸರ್ವೇ ನಡೆಯುತ್ತಿತ್ತು. ಈ ವೇಳೆ ಒಂದು ಕೈಯಲ್ಲಿ ಗಂಟೆ, ಇನ್ನೊಂದು ಕೈಯಲ್ಲಿ ಬೆಂಕಿಯ ದೊಂದಿ ಹಿಡಿದುಕೊಂಡು ಸುರೇಶ್ ಸರ್ವೇ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದು, ಕಾಂತಾರದ ದೈವದಂತೆ ಅಬ್ಬರಿಸುತ್ತಾ, ಓಡಿ ಬಂದು ಸರ್ವೇ ನಡೆಯುತ್ತಿದ್ದ ಸ್ಥಳದಲ್ಲಿ ನಿಂತಿದ್ದ ತನ್ನ ತಮ್ಮನ ಪತ್ನಿಯ ಮೇಲೆ ದೊಂದಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಲ್ಲಿದ್ದವರು ಆತನನ್ನು ತಡೆದು ಹಿಡಿದುಕೊಳ್ಳಲು ಯತ್ನಿಸುತ್ತಿದ್ದಂತೆಯೇ ಅವರ ಕೈಯಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸರ್ವೆ ಮಾಡುವ ಸ್ಥಳಕ್ಕೆ ಬಂದು ದೈವ ಬಂದಿದೆ ಎಂದು ಸುರೇಶ್ ಹೈಡ್ರಾಮಾ ಮಾಡಿದ್ದಾನೆ. ಸುರೇಶ್ ನ ಕಾಂತಾರ ಸಿನಿಮಾವನ್ನೂ ಮೀರಿಸಿದ ಹೈಡ್ರಾಮಕ್ಕೆ ಸ್ಥಳದಲ್ಲಿದ್ದ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಒಟ್ಟಿನಲ್ಲಿ ಕಾಂತಾರ ಬಂದ ನಂತರ ದೈವಗಳ ವೇಷ ಧರಿಸಿ ರೌಡಿಸಂ ನಡೆಸುವ ಘಟನೆಗಳು ನಡೆಯುತ್ತಿರುವುದು ದುರಾದೃಷ್ಟಕರವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























