ಯುವತಿಯೊಂದಿಗಿನ ಸಲಿಂಗ ಕಾಮಕ್ಕೆ ಅಡ್ಡಿಯಾದ ಮಗುವನ್ನು ಹತ್ಯೆ ಮಾಡಿದ ತಾಯಿ!
ಆನೇಕಲ್: ಯುವತಿಯೊಂದಿಗಿನ ಸಲಿಂಗ ಕಾಮಕ್ಕೆ ಅಡ್ಡಿಯಾಗುತ್ತಿದೆ ಎಂದು 5 ತಿಂಗಳ ಮಗುವನ್ನು ತಾಯಿಯೇ ಹತ್ಯೆ ಮಾಡಿರುವ ಘಟನೆ ಕರ್ನಾಟಕ ಗಡಿ ಭಾಗ ಅನೇಕಲ್ ಸಮೀಪ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ.
ಘಟನೆಯ ನಂತರ ಆರೋಪಿಗಳಾದ ಭಾರತಿ (26) ಹಾಗೂ ಸುಮಿತ್ರಾ (22) ಎಂಬ ಯುವತಿಯನ್ನು ಕೆಳಮಂಗಲಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಚಿನ್ನಟ್ಟಿಯ ಸುರೇಶ್ ಮತ್ತು ಭಾರತಿ ದಂಪತಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಒಂದು ಗಂಡು ಮಗುವಿದೆ. ಇದೇ ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿತ್ತು. ಪತಿ ಇಲ್ಲದ ಸಂದರ್ಭದಲ್ಲಿ ಭಾರತಿ—ಸುಮಿತ್ರಾ ಇಬ್ಬರು ಮನೆಯಲ್ಲಿ ಜೊತೆಯಾಗುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದಲೂ ಇವರ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಬೆತ್ತಲೆ ವಿಡಿಯೋ ಕಾಲ್, ಖಾಸಗಿ ಫೋಟೋ ಶೇರ್ ಮಾಡಿಕೊಳ್ಳಲು ಪ್ರತ್ಯೇಕ ಮೊಬೈಲ್ ಇಟ್ಟುಕೊಂಡಿದ್ದರು. ಭಾರತಿಯು ಸುಮಿತ್ರಳ ಹೆಸರನ್ನು ಟ್ಯಾಟೋ ಹಾಕಿಸಿಕೊಂಡಿದ್ದಳು.
5 ತಿಂಗಳ ಹಿಂದೆ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಭಾರತಿ ಹೆಚ್ಚಿನ ಸಮಯ ನೀಡುತ್ತಿದ್ದರಿಂದಾಗಿ ಸುಮಿತ್ರಾ ಜೊತೆಗೆ ಸಂಬಂಧ ಕಡಿಮೆಯಾಗುತ್ತಿತ್ತು. ಹೀಗಾಗಿ ಸುಮಿತ್ರಾ—ಭಾರತಿಯ ಜೊತೆಗೆ ಪದೇ ಪದೇ ಜಗಳವಾಡಲು ಆರಂಭಿಸಿದ್ದಳು. ಮಗುವಿನಿಂದಾಗಿಯೇ ನಮ್ಮ ನಡುವೆ ಜಗಳವಾಗುತ್ತಿದೆ. ಮಗುವನ್ನು ಕೊಂದು ಹಾಕುವಂತೆ ಭಾರತಿಗೆ ಸುಮಿತ್ರಾ ಒತ್ತಡ ಹಾಕಿದ್ದಳು. ಅದರಂತೆ ಭಾರತಿ ತನ್ನ ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು. ಬಳಿಕ ಮಗು ಹಾಲು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದೆ ಎಂದು ಕಥೆಕಟ್ಟಿದ್ದಳು. ಇದನ್ನು ನಂಬಿದ್ದ ಕುಟುಂಬಸ್ಥರು ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಇದಾದ ನಂತರ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಆಕೆಯ ಪತಿ ಸುರೇಶ್ ಗೆ ಸಿಕ್ಕಿತ್ತು. ಇದರಿಂದಾಗಿ ಇವರಿಬ್ಬರ ಸಲಿಂಗ ಕಾಮ ಮತ್ತು ಮಗುವಿನ ಹತ್ಯೆಯ ರಹಸ್ಯ ಬಯಲಾಗಿದೆ. ಹೀಗಾಗಿ ಸಾಕ್ಷಿ ಸಮೇತವಾಗಿ ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಳಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ವಿರುದ್ದ ಪ್ರಕರಣ ದಾಖಲಾಗಿದೆ. ಮಗುವಿನ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮೇಲೆತ್ತಲಾಗಿದೆ. ಸದ್ಯ ಭಾರತಿ ಮತ್ತು ಸುಮಿತ್ರಾಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























