ಒಂದೇ ಚಿತೆಯಲ್ಲಿ ಏಕಕಾಲಕ್ಕೆ 5 ಮೃತದೇಹಗಳ ಅಂತ್ಯಸಂಸ್ಕಾರ!
ಸೂರತ್: ಗುಜರಾತ್ ನಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಇದೀಗ ಅಂತ್ಯ ಸಂಸ್ಕಾರ ಮಾಡುವುದೇ ಸಮಸ್ಯೆಯಾಗಿ ಕಾಡಿದ್ದು, ಒಂದೇ ಚಿತಾಗಾರದಲ್ಲಿ 24 ಗಂಟೆಗಳ ಕಾಲ ಸಂತ್ಯಸಂಸ್ಕಾರ ನಡೆಸಿದರೂ ಮೃತದೇಹಗಳು ಬರುತ್ತಲೇ ಇವೆ ಎಂದು ವರದಿಯಾಗಿದೆ.
ಮೃತದೇಹಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿರುವುದರಿಂದಾಗಿ ಬುಧವಾರ ಒಂದೇ ಚಿತೆಯಲ್ಲಿ 5 ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲಾಗಿದೆ. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಗುಜರಾತ್ ಸರ್ಕಾರ ಕೊವಿಡ್ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯನ್ನು ಪ್ರಕಟಿಸುತ್ತಿದೆ. ಆದರೆ, ಸರ್ಕಾರ ನೀಡುತ್ತಿರುವ ಸಂಖ್ಯೆಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್ ನ ಪ್ರಮುಖ ನಾಲ್ಕು ನಗರಗಳಲ್ಲಿ ದಿನನಿತ್ಯ 25 ಸಾವು ಸಂಭವಿಸುತ್ತಿದೆ. ಭರೂಚ್ ನಲ್ಲಿ ಏಪ್ರಿಲ್ 7ರಿಂದ ಇಲ್ಲಿಯವರೆಗೆ ಸುಮಾರು 260 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಸ್ಥಳೀಯ ಆಡಳಿತ ಈ ಸಂಖ್ಯೆಯನ್ನು ಮರೆಮಾಚಿ, ಕೇವಲ 36 ಜನರು ಮಾತ್ರವೇ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ. ಇನ್ನೂ ವಡೋದರದ ಸಯ್ಯಾಜಿರಾವ್ ಆಸ್ಪತ್ರೆಯೊಂದರಲ್ಲಿಯೇ 180 ಕೊವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಕೊರೊನಾ ಆರಂಭವಾದಂದಿನಿಂದ ಇಲ್ಲಿಯವರೆಗೆ ಕೇವಲ 300 ಜನರು ಇಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವವಾಗಿ ಇದು ಸುಳ್ಳು ವರದಿಯಾಗಿದೆ ಎಂದು ಹೇಳಲಾಗಿದೆ. ಅಂದಹಾಗೆ ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಕೂಡ ಹೌದು.




























