7.11 ಕೋಟಿ ಹಗಲು ದರೋಡೆ:  ಕಾನ್ ಸ್ಟೆಬಲ್, ಮಾಜಿ ಉದ್ಯೋಗಿಗಳೇ ಸೂತ್ರಧಾರರು: ಹೀಗಿದೆ ನೋಡಿ ಸ್ಟೋರಿ - Mahanayaka
12:29 PM Saturday 22 - November 2025

7.11 ಕೋಟಿ ಹಗಲು ದರೋಡೆ:  ಕಾನ್ ಸ್ಟೆಬಲ್, ಮಾಜಿ ಉದ್ಯೋಗಿಗಳೇ ಸೂತ್ರಧಾರರು: ಹೀಗಿದೆ ನೋಡಿ ಸ್ಟೋರಿ

bank robbery
22/11/2025

ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದ ಸೂತ್ರಧಾರರು ಪೊಲೀಸ್‌ ಕಾನ್‌ ಸ್ಟೆಬಲ್‌ ಹಾಗೂ ಸಿಎಂಎಸ್‌ ಏಜೆನ್ಸಿಯ ಮಾಜಿ ಉದ್ಯೋಗಿ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ ಸ್ಟೆಬಲ್ ಅಣ್ಣಪ್ಪ ನಾಯ್ಕ, ಸಿಎಂಎಸ್‌ ಏಜೆನ್ಸಿ ಮಾಜಿ ಉದ್ಯೋಗಿ ಕ್ಷೇವಿಯರ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮೇಲೂ ಶಂಕೆಯಿದ್ದು, ಸೂಕ್ತ ಸಾಕ್ಷ್ಯಾಧಾರಗಳು ಲಭಿಸಿದ ತಕ್ಷಣವೇ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಆಂಧ್ರಪ್ರದೇಶದ ಚಿತ್ತೂರು, ತಮಿಳುನಾಡಿನ ಚೆನ್ನೈನಲ್ಲಿ ನಾಲ್ವರು, ಬೆಂಗಳೂರಿನ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿ ಕಂಡಿದೆ. ಸದ್ಯದಲ್ಲೇ ಉಳಿದವರನ್ನೂ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಪೊಲೀಸ್ ಮೂಲಗಳು ಹೇಳಿವೆ. ವಶಕ್ಕೆ ಪಡೆದ ಶಂಕಿತರ ಪೈಕಿ, ಇಬ್ಬರು ಮಾಜಿ ಸೈನಿಕರೊಬ್ಬರ ಪುತ್ರ ಎಂದು ಹೇಳಲಾಗಿದೆ.

ಇನ್ನೂ ಅಣ್ಣಪ್ಪ ನಾಯ್ಕ ಗೋವಿಂದಪುರ ಠಾಣೆಯಲ್ಲಿ ಕಾನ್‌ ಸ್ಟೆಬಲ್‌ ಆಗಿದ್ದು, ಈ ಹಿಂದೆ ಬಾಣಸವಾಡಿ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ನಂತರ, ಅವರನ್ನು ಹೊಯ್ಸಳ ಗಸ್ತು ವಾಹನಕ್ಕೆ ನಿಯೋಜಿಸಲಾಗಿತ್ತು, ಗಸ್ತು ವೇಳೆ ಕೇವಿಯರ್ ಹಾಗೂ ರವಿಯ ಪರಿಚಯವಾಗಿತ್ತು. ಪ್ರತಿನಿತ್ಯ ಮೂವರೂ ಭೇಟಿಯಾಗಿ ಚರ್ಚಿಸುತ್ತಿದ್ದರು. ಕ್ಷೇವಿಯರ್ ಅವರು ಸಿಎಂಎಸ್ ಏಜೆನ್ಸಿ ವಾಹನದಲ್ಲಿ ಹಣ ರವಾನೆಯ ಬಗ್ಗೆ ಹೇಳಿಕೊಂಡಿದ್ದ. ಟ್ರಾವೆಲ್ ಏಜೆನ್ಸಿ ನಡೆಸಿ ನಷ್ಟಕ್ಕೆ ಒಳಗಾಗಿದ್ದೇನೆ ಎಂದೂ ರವಿ ಅಳಲು ತೋಡಿಕೊಂಡಿದ್ದರು. ಮೂವರು ಸೇರಿಕೊಂಡು ಕಲ್ಯಾಣನಗರ, ಕಮ್ಮನಹಳ್ಳಿಯ ಯುವಕರನ್ನು ಬಳಸಿಕೊಂಡು ದರೋಡೆ ನಡೆಸಲು ಸಂಚು ನಡೆಸಿದ್ದು, ಸಮಯದಲ್ಲಿ ದರೋಡೆ ನಡೆಸಬೇಕು, ದರೋಡೆ ನಂತರ ಪೊಲೀಸರಿಂದ ಹೇಗೆ ಪಾರಾಗಬೇಕು? ಪೊಲೀಸರ ತನಿಖೆ ಯಾವ ರೀತಿ ಸಾಗುತ್ತದೆ ಎಂಬ ವಿಚಾರವನ್ನು ಅಣ್ಣಪ್ಪ, ಹುಡುಗರಿಗೆ ತಿಳಿಸಿ ಸಂಚು ರೂಪಿಸಿದ್ದ. ಅಲ್ಲದೇ ಸಿ.ಸಿ.ಟಿ.ವಿ ಕ್ಯಾಮೆರಾವಿಲ್ಲದ ಸ್ಥಳಗಳಲ್ಲಿ ಕೃತ್ಯ ಎಸಗಬೇಕು ಎಂಬುದನ್ನೂ ಹೇಳಿಕೊಟ್ಟಿದ್ದ. ಕಾನ್‌ ಸ್ಟೆಬಲ್‌ ಸೂಚನೆಯಂತೆ ಹುಡುಗರು, 7.11 ಕೋಟಿ ದರೋಡೆ ನಡೆಸಿದ್ದಾರೆ. ಅಲ್ಲದೆ, ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ಉದ್ಯೋಗಿಗಳು ಕೃತ್ಯಕ್ಕೆ ಬೆಂಬಲ ನೀಡಿರುವುದಕ್ಕೆ ಸುಳಿವು ಸಿಕ್ಕಿದೆ. ದರೋಡೆ ನಡೆಸಿದ ಸ್ವಲ್ಪ ಹಣವನ್ನು ರಾಜ್ಯದ ಗಡಿಭಾಗದಲ್ಲಿ ಬಚ್ಚಿಟ್ಟು ತಂಡ ಪರಾರಿಯಾಗಿದೆ ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ