ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಸುರತ್ಕಲ್ ನಲ್ಲಿ 12 ತಾಸುಗಳ ಸಾಮೂಹಿಕ ಧರಣಿ - Mahanayaka
11:24 AM Tuesday 2 - December 2025

ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಸುರತ್ಕಲ್ ನಲ್ಲಿ 12 ತಾಸುಗಳ ಸಾಮೂಹಿಕ ಧರಣಿ

surathkal
02/12/2025

ಮಂಗಳೂರು: ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್” ನೇತೃತ್ವದಲ್ಲಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸಾಮೂಹಿಕ ಧರಣಿ ನಡೆಯಿತು. ಹಲವು ಜನಪರ ಸಂಘಟನೆಗಳು, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಧರಣಿಯಲ್ಲಿ ಭಾಗಿಗಳಾದರು.

ಸಾಮೂಹಿಕ ಧರಣಿಯನ್ನು ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತಾಡಿದರು. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರು ದಶಕದ ಹಿಂದೆ ಹೆರಿಗೆ ಸೌಲಭ್ಯಗಳನ್ನು ಒದಗಿಸುತ್ತಿತ್ತು. ದಿನದ ಇಪ್ಪತ್ತ ನಾಲ್ಕು ತಾಸು ಕಾರ್ಯಾಚರಿಸುತ್ತಿತ್ತು. ಜನ ಸಾಮಾನ್ಯರ ಪಾಲಿಗೆ ಆಶಾಕಿರಣವಾಗಿತ್ತು. ಆದರೆ, ಇಂದು ಅದು ಮಕ್ಕಳ‌‌ ಲಸಿಕೆ, ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ‌ ಕಲಿಕೆಗೆ ಸೀಮಿತವಾಗಿದೆ. ಕನಿಷ್ಟ ಪಕ್ಷ ಪೂರ್ಣಕಾಲಿಕ ವೈದ್ಯರನ್ನು ಒದಗಿಸಲೂ ಸಾಧ್ಯವಾಗಿಲ್ಲ. ಸಂಜೆ ನಾಲ್ಕು ಗಂಟೆಗೆ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿಯಲಾಗುತ್ತಿದೆ. ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಹಿತಾಸಕ್ತಿಗಳ ಭಾಗವಾಗಿ ಸರಕಾರಿ ಆರೋಗ್ಯಕೇಂದ್ರ, ಆಸ್ಪತ್ರೆಗಳ ಕತ್ತು ಹಿಸುಕಲಾಗುತ್ತಿದೆ. ಸ್ಥಳೀಯ ಶಾಸಕರುಗಳಿಗೆ ಈ ಸಮಸ್ಯೆಗಳೆಲ್ಲ ಆದ್ಯತೆಯಾಗಿ ಉಳಿದಿಲ್ಲ. ಕೋಳಿ ಅಂಕ, ಡಿ‌ಜೆ ಮ್ಯೂಸಿಕ್ ಗೆ ಅವಕಾಶ ಒದಗಿಸಲು ವಿಧಾನ ಸಭೆ ಅಧಿವೇಶನದಲ್ಲಿ ಬಡಿದಾಡುವ ಶಾಸಕರುಗಳಿಂದ ಸರಕಾರಿ ಆಸ್ಪತ್ರೆಗಳ ಉಳಿವಿಗಾಗಿ ಧ್ವನಿ ಎತ್ತುವ ನಿರೀಕ್ಷೆ ಇಟ್ಟುಕೊಳ್ಳುವ ಹಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣವಂತೂ ಖಾಸಗಿ ಮೆಡಿಕಲ್ ಲಾಭಿಯ ಹಿಡಿತಕ್ಕೆ ಪೂರ್ಣವಾಗಿ ಸಿಲುಕಿದೆ. ಜನತೆಯೇ ಒಗ್ಗಟ್ಟಾಗಿ ಹೋರಾಟ ನಡೆಸದೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಲವರ್ಧನೆ ಅಸಾಧ್ಯ. ಇಂದಿನ ಸಾಮೂಹಿಕ ಧರಣಿ ಆರಂಭ ಮಾತ್ರ, ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಾಣ ಆಗದೆ ವಿರಮಿಸುವುದಿಲ್ಲ, ಆ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ರಂಗ ಕಲಾವಿದೆ ಗೀತಾ ಸುರತ್ಕಲ್ ಮಾತನಾಡಿ, ಹುಟ್ಟೂರು ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆಗಾಗಿ ಸಂಘಟಿತ ಹೋರಾಟ ನಡೆಯುತ್ತಿರುವುದು ಸಂತೋಷದ ಸಂಗತಿ, ಆರೋಗ್ಯದ ಹಕ್ಕು ಪ್ರತಿಯೊಬ್ಬರಿಗೂ ಸಿಗಬೇಕಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ ಮಾತಾಡುತ್ತಾ, ದಲಿತರು, ಬಡವರಿಗೆ ದುಬಾರಿ  ಖಾಸಗಿ ಆಸ್ಪತ್ರೆಗಳಲ್ಲಿ ಪ್ರವೇಶ ಇಲ್ಲ, ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆಗಳಿಲ್ಲ, ಹಾಸಿಗೆಗಳು ಖಾಲಿ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗಾಗಿ ಬಲವಾದ ಹೋರಾಟ ನಡೆಸದಿದ್ದರೆ ಕೆಳ ವರ್ಗದ ಜನತೆಗೆ ಬದುಕೆ ಇಲ್ಲ ಎಂದು ಹೇಳಿದರು.

ಸುರತ್ಕಲ್ ಪ್ರದೇಶದ ಸಾಮಾಜಿಕ ಮುಂದಾಳು ವೈ. ರಾಘವೇಂದ್ರ ರಾವ್ ಮಾತನಾಡುತ್ತಾ, ಜನಸಮಾನ್ಯರ ಕೂಗಿಗೆ ಯಾವುದೆ ರಾಜಕೀಯ ನಾಯಕರು ಸ್ಪಂದಿಸುತ್ತಿಲ್ಲ, ಸುರತ್ಕಲ್ ಸಮುದಾಯ ಆಸ್ಪತ್ರೆಗಾಗಿ ಟೋಲ್ ತೆರವು ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಧರಣಿಯ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ‌ ನೀಡಿ ಮನವಿ ಸ್ವೀಕರಿಸಿದರು.  ಡಿವೈಎಫ್ ಐ ಮುಂದಾಳುಗಳಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಕೃಷ್ಣಾನಂದ ಡಿ.ರಘು ಎಕ್ಕಾರು, ಶೇಖರ ಹೆಜಮಾಡಿ, ಎಂ.ದೇವ್ ದಾಸ್ ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ., ಕೃಷ್ಣಾ ಇನ್ನಾ, ಸಾಮಾಜಿಕ ಕಾರ್ಯಕರ್ತರಾದ ರಮೇಶ್ ಟಿ.ಎನ್., ರವಿ ಪೂಜಾರಿ ಸೂರಿಂಜೆ, ದಯಾನಂದ ಶೆಟ್ಟಿ ಪಂಜಿಮೊಗರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ, ಅಸುಂತಾ, ಸಿಲ್ವಿಯಾ, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ, ದೀಪಕ್ ಪೆರ್ಮುದೆ, ಸಲೀಂ ಶ್ಯಾಡೋ, ಹರೀಶ್ ಪೇಜಾವರ, ಸದಾಶಿವ ಕುಪ್ಪೆಪದವು, ವಸಂತಿ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಪ್ರಮುಖರಾದ ಮಕ್ಸೂದ್ ಬಿ ಕೆ, ಅಜ್ಮಾನ್ ಕಾನ, ಶೆರೀಫ್ ಕಾಲೊನಿ, ಚಂದ್ರಕಾಂತ ದೇವಾಡಿಗ, ಕಬೀರ್ ಕೃಷ್ಣಾಪುರ, ಮುಸ್ತಫಾ ಬೈಕಂಪಾಡಿ, ಹಮೀದ್ ಕಟ್ಲ, ರಶೀದ್ ಸೂರಲ್ಪಾಡಿ, ಜಬ್ಬಾರ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.  ಹೋರಾಟ ಸಮಿತಿ ಸುರತ್ಕಲ್ ಘಟಕದ ಸಂಚಾಲಕರಾದ ಶ್ರೀನಾಥ್ ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ