ಬಿಜೆಪಿ ಶಾಸಕನ ಪುತ್ರನ ವಿವಾಹ: 1 ಸಾವಿರ ಬಾಣಸಿಗರು, 30 ಸಾವಿರ ಅತಿಥಿಗಳು, 8 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್!
ರೈಸೆನ್ (ಮಧ್ಯಪ್ರದೇಶ): ರಾಜಕಾರಣಿಗಳ ಮನೆಯ ಶುಭ ಸಮಾರಂಭಗಳು ಅಂದಮೇಲೆ ಅಲ್ಲಿ ವೈಭವಕ್ಕೆ ಮಿತಿಯಿರುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಮಧ್ಯಪ್ರದೇಶದ ರೈಸೆನ್‌ನಲ್ಲಿ ನಡೆದ ಬಿಜೆಪಿ ಶಾಸಕ ಡಾ. ಪ್ರಭು ರಾಮ್ ಚೌಧರಿ ಅವರ ಪುತ್ರ ಪರ್ವ್ ಚೌಧರಿ ಅವರ ವಿವಾಹ ಆರತಕ್ಷತೆಯು ಇಡೀ ರಾಜ್ಯದ ಗಮನ ಸೆಳೆದಿದೆ. ದಸರಾ ಉತ್ಸವದಂತೆ ಕಂಗೊಳಿಸಿದ ಈ ಕಾರ್ಯಕ್ರಮವು ತನ್ನ ಅದ್ದೂರಿತನದಿಂದಲೇ ಚರ್ಚೆಗೆ ಗ್ರಾಸವಾಗಿದೆ.
ಬೃಹತ್ ಸಿದ್ಧತೆ ಮತ್ತು ಜನಸಾಗರ: ಸಾಂಚಿ ಕ್ಷೇತ್ರದ ಶಾಸಕರಾಗಿರುವ ಪ್ರಭು ರಾಮ್ ಚೌಧರಿ ಅವರು ತಮ್ಮ ಹಿರಿಯ ಮಗನ ಮದುವೆಗಾಗಿ ಸುಮಾರು 8 ಎಕರೆ ವಿಸ್ತೀರ್ಣದ ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿದ್ದರು. ಇದು ಒಂದು ಪುಟ್ಟ ಟೌನ್‌ಶಿಪ್‌ನಂತೆ ಭಾಸವಾಗುತ್ತಿತ್ತು. ಈ ಅದ್ದೂರಿ ಸಮಾರಂಭಕ್ಕೆ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಅತಿಥಿಗಳು ಆಗಮಿಸಿದ್ದರು. ಜನಸಾಗರವೇ ಹರಿದು ಬಂದ ಕಾರಣ ರೈಸೆನ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.
1 ಸಾವಿರ ಬಾಣಸಿಗರು, 25ಕ್ಕೂ ಹೆಚ್ಚು ಭಕ್ಷ್ಯಗಳು: ಅತಿಥಿಗಳಿಗೆ ಉಣಬಡಿಸಲು ಭರ್ಜರಿ ತಯಾರಿ ನಡೆಸಲಾಗಿತ್ತು. ಸುಮಾರು 1,000 ಬಾಣಸಿಗರು ಹಗಲಿರುಳು ಶ್ರಮಿಸಿ ದೇಶಿ ಮತ್ತು ವಿದೇಶಿ ಶೈಲಿಯ 25ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಇಡೀ ಊಟದ ವ್ಯವಸ್ಥೆಯನ್ನು ಅಜಬ್ ಸಿಂಗ್ ಧಾಕಡ್ ಎಂಬುವವರು ನಿರ್ವಹಿಸಿದ್ದರು.
ಗಣ್ಯರ ಆಗಮನ: ಈ ವೈಭವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಸೇರಿದಂತೆ ಹಲವು ಸಚಿವರು ಮತ್ತು ಉದ್ಯಮಿಗಳು ಭಾಗವಹಿಸಿ ನವಜೋಡಿಯನ್ನು ಹರಸಿದರು. ಅತಿಥಿಗಳ ಮನರಂಜನೆಗಾಗಿ ರಾಜಸ್ಥಾನದ ಪ್ರಸಿದ್ಧ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸರಳತೆ Vs ವೈಭವ: ಒಂದೆಡೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇತ್ತೀಚೆಗಷ್ಟೇ ತಮ್ಮ ಮಗನ ವಿವಾಹವನ್ನು ಅತ್ಯಂತ ಸರಳವಾಗಿ ನೆರವೇರಿಸಿ, ಅದರೊಂದಿಗೆ 22 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿ ಮಾದರಿಯಾಗಿದ್ದರು. ಆದರೆ ಅದೇ ಪಕ್ಷದ ಶಾಸಕರೊಬ್ಬರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಇಷ್ಟೊಂದು ಅದ್ದೂರಿಯಾಗಿ ಮದುವೆ ಮಾಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























