ಬೆಂಗಳೂರು: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯನ್ನ ಗುಂಡಿಕ್ಕಿ ಕೊಂದ ಪತಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ಸಂಜೆ ಭೀಕರ ಶೂಟೌಟ್ ನಡೆದಿದ್ದು, ವಿಚ್ಛೇದನ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯನ್ನು ಪತಿಯೇ ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದ ಭುವನೇಶ್ವರಿ (35) ಮೃತ ದುರ್ದೈವಿ.
ಬಾಲಮುರುಗನ್ ಮತ್ತು ಭುವನೇಶ್ವರಿ 2011ರಲ್ಲಿ ವಿವಾಹವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ಮುರುಗನ್ ಆಗಾಗ ಜಗಳ ತೆಗೆಯುತ್ತಿದ್ದನು. ಈ ಕೌಟುಂಬಿಕ ಕಲಹದಿಂದ ಬೇಸತ್ತ ಭುವನೇಶ್ವರಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಸಂಜೆ ನ್ಯಾಯಾಲಯದ ವಿಚಾರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗ, ಹೊಂಚು ಹಾಕಿದ್ದ ಮುರುಗನ್ ಏಕಾಏಕಿ ಪಿಸ್ತೂಲ್‌ನಿಂದ ಐದು ರೌಂಡ್ ಗುಂಡು ಹಾರಿಸಿದ್ದಾನೆ.
ತಲೆ ಮತ್ತು ಕೈಗೆ ತೀವ್ರ ಗಾಯಗಳಾಗಿದ್ದ ಭುವನೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಮುರುಗನ್ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯು ಅಕ್ರಮವಾಗಿ ಪಿಸ್ತೂಲ್ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಪಶ್ಚಿಮ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























