ಚಿಕ್ಕಮಗಳೂರು: ಬೇಟೆಗಾರರ ಕ್ರೌರ್ಯಕ್ಕೆ ಮೂರು ಕೃಷ್ಣಮೃಗ ಬಲಿ; ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪ
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬಾಸೂರು ಕಾವಲ್‌ನಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಮೂರು ಕೃಷ್ಣಮೃಗಗಳನ್ನು ಬೇಟೆಗಾರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೃಷ್ಣಮೃಗಗಳು ರಾಜ್ಯದಲ್ಲಿ ಕೇವಲ ಹಾವೇರಿ ಮತ್ತು ಚಿಕ್ಕಮಗಳೂರಿನಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ತಳಿಯಾಗಿದ್ದು, ಈ ಘಟನೆ ಪ್ರಕೃತಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಸೂರು ಕೃಷ್ಣಮೃಗ ಸಂರಕ್ಷಿತ ಪ್ರದೇಶದ ಪಕ್ಕದ ಖಾಸಗಿ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಹತ್ಯೆಯಾದ ಪ್ರಾಣಿಗಳಲ್ಲಿ ಎರಡು ಹೆಣ್ಣು ಹಾಗೂ ಒಂದು ಗಂಡು ಕೃಷ್ಣಮೃಗ ಸೇರಿದ್ದು, ಇವುಗಳ ಪ್ರಾಯ ಕೇವಲ 2 ವರ್ಷ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಲಾಖೆಯ ಮೇಲೆ ಗಂಭೀರ ಆರೋಪ: ಈ ಪ್ರಕರಣವನ್ನು ಮುಚ್ಚಿಹಾಕಲು ಅರಣ್ಯ ಇಲಾಖೆ ಯತ್ನಿಸುತ್ತಿದೆ ಎಂದು ಪರಿಸರವಾದಿಗಳು ಗಂಭೀರ ಆರೋಪ ಮಾಡಿದ್ದಾರೆ. ನಿಯಮದ ಪ್ರಕಾರ ಸಂಜೆ ಬಳಿಕ ವನ್ಯಜೀವಿಗಳ ಶವಪರೀಕ್ಷೆ ಅಥವಾ ಅಂತ್ಯಸಂಸ್ಕಾರ ಮಾಡುವಂತಿಲ್ಲ. ಆದರೆ, ಅಧಿಕಾರಿಗಳು ಘಟನೆ ನಡೆದ ದಿನವೇ ಸಂಜೆ ಅವಸರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದು ಅಪರಾಧಿಗಳನ್ನು ರಕ್ಷಿಸುವ ಹುನ್ನಾರವೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಬೀರೂರು ವಲಯ ಅರಣ್ಯ ಅಧಿಕಾರಿಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























