ಸ್ವಂತ ಕಾರಿಗೆ ‘ಪೊಲೀಸ್’ ಬೋರ್ಡ್ ಹಾಕಿ ಪ್ರವಾಸ: ಐಡಿ ಕಾರ್ಡ್ ತೋರಿಸಿದ್ರೂ ದಂಡ ಹಾಕಿದ ಲೇಡಿ ಸಿಂಗಂ!
ಮೂಡಿಗೆರೆ: “ಕಾನೂನು ಎಲ್ಲರಿಗೂ ಒಂದೇ” ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಅವರು ಸಾಬೀತುಪಡಿಸಿದ್ದಾರೆ. ಸ್ವಂತ ಕಾರಿಗೆ ‘ಪೊಲೀಸ್’ ಬೋರ್ಡ್ ಹಾಕಿಕೊಂಡು ಸಂಚರಿಸುತ್ತಿದ್ದ ಪೊಲೀಸ್ ಕುಟುಂಬಕ್ಕೇ ದಂಡ ವಿಧಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆಯ ವಿವರ: ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದೊಂದಿಗೆ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಈ ವೇಳೆ ತಮ್ಮ ಖಾಸಗಿ ಕಾರಿನ ಮುಂದೆ ‘ಪೊಲೀಸ್’ ಎಂಬ ಬೋರ್ಡ್ ಅಳವಡಿಸಿಕೊಂಡಿದ್ದರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್ ಪಿಎಸೈ ರೇಣುಕಾ ಅವರು ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಐಡಿ ಕಾರ್ಡ್ ತೋರಿಸಿದರೂ ಮಣಿಯದ ಪಿಎಸೈ: ಕಾರನ್ನು ತಡೆದಾಗ ಚಾಲಕ ಹಾಗೂ ಕುಟುಂಬಸ್ಥರು ತಾವು ಪೊಲೀಸ್ ಇಲಾಖೆಯವರೆಂದು ಹೇಳಿ ತಮ್ಮ ಗುರುತಿನ ಚೀಟಿಯನ್ನು (ID Card) ತೋರಿಸಿದ್ದಾರೆ. ಆದರೆ, ಖಾಸಗಿ ವಾಹನಗಳ ಮೇಲೆ ಇಲಾಖೆಯ ಹೆಸರನ್ನು ಬಳಸುವುದು ನಿಯಮಬಾಹಿರ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ ಪಿಎಸೈ, ಸಹೋದ್ಯೋಗಿ ಎಂಬ ಮುಲಾಜಿಲ್ಲದೆ ದಂಡ ವಿಧಿಸಿದ್ದಾರೆ.
ಸ್ಥಳದಲ್ಲೇ ಬೋರ್ಡ್ ತೆರವು: ದಂಡ ವಿಧಿಸುವುದಲ್ಲದೆ, ಕಾರಿನ ಮೇಲಿದ್ದ ಪೊಲೀಸ್ ಬೋರ್ಡ್ ಅನ್ನು ಸ್ಥಳದಲ್ಲೇ ತೆರವುಗೊಳಿಸಿದ ನಂತರವಷ್ಟೇ ಪ್ರವಾಸ ಮುಂದುವರಿಸಲು ಅನುವು ಮಾಡಿಕೊಟ್ಟರು. ಕರ್ತವ್ಯ ನಿಷ್ಠೆ ಮೆರೆದ ಪಿಎಸೈ ರೇಣುಕಾ ಅವರ ಈ ಕ್ರಮಕ್ಕೆ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























