ಮಂಗಳೂರು: ಕಳೆದು ಹೋದ ಪ್ರವಾಸಿಗರ ಮೊಬೈಲ್ ಚಾಣಾಕ್ಷ್ಯತನದಿಂದ ಪತ್ತೆ ಹಚ್ಚಿದ ಪ್ರವಾಸಿ ಮಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದ ಬೆಂಗಳೂರು ಮೂಲದ ಪ್ರವಾಸಿಗರಿಗೆ ಅಲ್ಲಿನ ‘ಪ್ರವಾಸಿ ಮಿತ್ರ’ ಸಿಬ್ಬಂದಿ ಸಕಾಲದಲ್ಲಿ ಸ್ಪಂದಿಸಿ ಮೊಬೈಲ್ ಪತ್ತೆ ಮಾಡಿಕೊಡುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಘಟನೆಯ ವಿವರ: ದಿನಾಂಕ 27/12/2025ರ ಶನಿವಾರ ಸಂಜೆ ಬೆಂಗಳೂರಿನಿಂದ ಪ್ರವಾಸಿಗರ ಗುಂಪೊಂದು ತಣ್ಣೀರು ಬಾವಿ ಬೀಚ್ಗೆ ಭೇಟಿ ನೀಡಿತ್ತು. ಸಂಜೆ ಸುಮಾರು 5.45ರಿಂದ 6.45ರ ನಡುವೆ ಪ್ರವಾಸಿಗರಲ್ಲೊಬ್ಬರ ದುಬಾರಿ ಬೆಲೆಯ ಮೊಬೈಲ್ ಫೋನ್ ಅಚಾನಕ್ಕಾಗಿ ಕಾಣೆಯಾಗಿತ್ತು. ಗಾಬರಿಗೊಂಡ ಪ್ರವಾಸಿಗರು ತಕ್ಷಣವೇ ಅಲ್ಲೇ ಕರ್ತವ್ಯದಲ್ಲಿದ್ದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ (ಪ್ರವಾಸಿ ಮಿತ್ರ) ರಾಘವೇಂದ್ರ ಅವರ ಗಮನಕ್ಕೆ ತಂದರು.
ಚಾಣಾಕ್ಷತೆಯಿಂದ ಮೊಬೈಲ್ ಪತ್ತೆ: ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ರಾಘವೇಂದ್ರ ಅವರು, ತಮ್ಮ ವೃತ್ತಿಪರ ಚಾಣಾಕ್ಷತೆಯನ್ನು ಬಳಸಿ ತನಿಖೆ ನಡೆಸಿದರು. ಕಳೆದುಹೋದ ಮೊಬೈಲ್ ಈಗಾಗಲೇ ಮತ್ತೊಬ್ಬರ ಕೈ ಸೇರಿರುವುದನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿದ ಅವರು, ಆ ವ್ಯಕ್ತಿಯಿಂದ ಮೊಬೈಲ್ ಪಡೆದು ಅಸಲಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ರಾಘವೇಂದ್ರ ಅವರ ಈ ಕರ್ತವ್ಯ ಪ್ರಜ್ಞೆ ಮತ್ತು ಸಮಯಪ್ರಜ್ಞೆಯನ್ನು ಕಂಡು ಬೆಂಗಳೂರಿನ ಪ್ರವಾಸಿಗರು ಧನ್ಯವಾದ ಅರ್ಪಿಸಿದ್ದಲ್ಲದೆ, ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಪ್ರವಾಸಿ ಮಿತ್ರರ ಕಾರ್ಯವೈಖರಿಗೆ ಮೆಚ್ಚುಗೆ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ‘ಪ್ರವಾಸಿ ಮಿತ್ರ’ ಸಿಬ್ಬಂದಿಗಳು ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಮತ್ತು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರವಾಸಿಗರು ಎದುರಿಸುವ ಹತ್ತಾರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿರುವ ಇವರ ಸೇವೆ, ಪ್ರವಾಸೋದ್ಯಮ ಇಲಾಖೆಯ ಗೌರವವನ್ನು ಹೆಚ್ಚಿಸಿದೆ. ತಣ್ಣೀರು ಬಾವಿಯಲ್ಲಿ ನಡೆದ ಈ ಘಟನೆಯು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿ ಮಿತ್ರರ ಉಪಸ್ಥಿತಿ ಎಷ್ಟು ಮುಖ್ಯ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























