ಹಿಂದುತ್ವದ ಭದ್ರಕೋಟೆಯಲ್ಲಿ ಹಿಂದೂ ಮಗಳು, ಆಕೆಯ ಪುಟ್ಟ ಮಗುವಿಗೆ ನ್ಯಾಯ ಮರೀಚಿಕೆ! | ರಾಮನಂತಾಗಲಿಲ್ಲ, ಬಿಜೆಪಿ ಮುಖಂಡನ ಮಗ ಕೃಷ್ಣ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮಗುವಿನ ತಂದೆ ಯಾರು ಎಂಬ ಬಗ್ಗೆ ನಡೆದ ಡಿಎನ್‌ಎ (DNA) ಪರೀಕ್ಷೆಯ ವರದಿ ಬಂದಿದ್ದು, ಆರೋಪಿ ಕೃಷ್ಣ ಜೆ. ರಾವ್ ಮಗುವಿನ ಜೈವಿಕ ತಂದೆ ಎಂಬುದು ದೃಢಪಟ್ಟಿದೆ. ಆದರೂ ಸಂತ್ರಸ್ತ ಯುವತಿಗೆ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಜಾತಿಯ ಕಾರಣಕ್ಕಾಗಿ ಮದುವೆ ನಿರಾಕರಣೆ ಮಾಡಲಾಗುತ್ತಿದೆಯೇ ಎನ್ನುವ ಶಂಕೆ ಕೂಡ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.
ಪ್ರಕರಣದ ಹಿನ್ನೆಲೆ: ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ಶಾಲಾ ದಿನಗಳಿಂದ ಪರಿಚಿತವಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ಗರ್ಭವತಿಯನ್ನಾಗಿಸಿದ್ದನು. ಮಗು ಜನಿಸಿದ ಬಳಿಕ ‘ಈ ಮಗು ನನಗೇ ಹುಟ್ಟಿದ್ದಲ್ಲ’ ಎಂದು ವಾದಿಸಿ ವಂಚನೆ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಮೆಟ್ಟಿಲೇರಿತ್ತು. ನ್ಯಾಯಾಲಯದ ಆದೇಶದಂತೆ ಮಗು, ತಾಯಿ ಹಾಗೂ ಆರೋಪಿಯ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನ ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದೆ.
ವಿಫಲವಾದ ಸಂಧಾನ: ಡಿಎನ್‌ಎ ವರದಿ ಬಂದ ಬಳಿಕವೂ ಆರೋಪಿ ಮತ್ತು ಆತನ ಕುಟುಂಬ ಯುವತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಸೇರಿದಂತೆ ಹಲವು ಗಣ್ಯರು ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಆರೋಪಿ ಕಡೆಯವರು ಮದುವೆಗೆ ಒಪ್ಪದ ಕಾರಣ ಸಂಧಾನ ಪ್ರಕ್ರಿಯೆ ಮುರಿದುಬಿದ್ದಿದೆ.
ನ್ಯಾಯಕ್ಕಾಗಿ ಕಾನೂನು ಹೋರಾಟ: “ನನಗೆ ಮತ್ತು ಮಗುವಿಗೆ ನ್ಯಾಯ ಸಿಗಬೇಕು, ಮಗುವಿಗೆ ತಂದೆಯ ಸ್ಥಾನ ಸಿಗಬೇಕು” ಎಂದು ಸಂತ್ರಸ್ತ ಯುವತಿ ಕಣ್ಣೀರಿಟ್ಟಿದ್ದಾರೆ. ಹಣದ ಆಮಿಷ ಒಡ್ಡಿದರೂ ಬಗ್ಗದ ಸಂತ್ರಸ್ತ ಕುಟುಂಬ, ಈಗ ಕಾನೂನು ಹೋರಾಟದ ಮೂಲಕವೇ ನ್ಯಾಯ ಪಡೆಯಲು ನಿರ್ಧರಿಸಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಆರೋಪಿಗೆ ಶಿಕ್ಷೆ ಕೊಡಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಪಕ್ಷದ ಹೆಸರಿಗೆ ಕಳಂಕ ತಂದ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿಯು ಜಗನ್ನಿವಾಸ್ ರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಪುತ್ತೂರಿನಂತಹ ಹಿಂದುತ್ವದ ಭದ್ರಕೋಟೆಯಲ್ಲಿ ಬಡ ಹಿಂದೂ ಹೆಣ್ಣುಮಗಳಿಗೆ ನ್ಯಾಯ ಸಿಗದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























