ಕಾಲೇಜು ಮಂಡಳಿಯಿಂದ ಕಿರುಕುಳ ಆರೋಪ: ಆನೇಕಲ್‌ ನಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ - Mahanayaka

ಕಾಲೇಜು ಮಂಡಳಿಯಿಂದ ಕಿರುಕುಳ ಆರೋಪ: ಆನೇಕಲ್‌ ನಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

Yashaswini
09/01/2026

ಆನೇಕಲ್: ಕಾಲೇಜು ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಯಶಸ್ವಿನಿ (23) ಎಂದು ಗುರುತಿಸಲಾಗಿದೆ. ಈಕೆ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಪರಿಮಳ ಮತ್ತು ಭೋದೆವಯ್ಯ ದಂಪತಿಯ ಒಬ್ಬಳೇ ಮಗಳಾಗಿದ್ದ ಯಶಸ್ವಿನಿ, ಕಾಲೇಜಿನಲ್ಲಿ ತನಗೆ ನೀಡಲಾಗುತ್ತಿದ್ದ ಮಾನಸಿಕ ಕಿರುಕುಳದಿಂದ ನೊಂದಿದ್ದಳು ಎಂದು ಹೇಳಲಾಗಿದೆ.

 

ಶೈಕ್ಷಣಿಕ ಕಿರುಕುಳ: ಕಾಲೇಜಿನಲ್ಲಿ ಸೆಮಿನಾರ್ ನೀಡಲು ಅವಕಾಶ ನೀಡುತ್ತಿರಲಿಲ್ಲ ಮತ್ತು ರೇಡಿಯಾಲಜಿ ಕೇಸ್‌ಗಳನ್ನು ನೀಡದೆ ಆಕೆಗೆ ತೊಂದರೆ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ವೈಯಕ್ತಿಕ ನಿಂದನೆ: ಕಳೆದ ಬುಧವಾರ ಕಣ್ಣು ನೋವಿನ ಕಾರಣಕ್ಕೆ ಯಶಸ್ವಿನಿ ಕಾಲೇಜಿಗೆ ರಜೆ ಹಾಕಿದ್ದಳು. ಮರುದಿನ ಕಾಲೇಜಿಗೆ ಹೋದಾಗ, ಪ್ರಾಧ್ಯಾಪಕರು ಆಕೆಯನ್ನು ವಿಚಾರಿಸುವ ನೆಪದಲ್ಲಿ “ಕಣ್ಣಿಗೆ ಯಾವ ಡ್ರಾಪ್ಸ್ ಹಾಕಿದೆ? ಎಷ್ಟು ಹನಿ ಹಾಕಿದೆ? ಬಾಟಲಿ ಪೂರ್ತಿ ಖಾಲಿ ಮಾಡಿದ್ಯಾ?” ಎಂದೆಲ್ಲಾ ಕೇಳಿ ಸಾರ್ವಜನಿಕವಾಗಿ ಅವಮಾನಿಸಿದ್ದರು ಎಂದು ಪೋಷಕರು ದೂರಿದ್ದಾರೆ.

 

ಪೋಷಕರ ಆಕ್ರೋಶ: ಮಗಳ ಸಾವಿನಿಂದ ಕಂಗಾಲಾಗಿರುವ ಪೋಷಕರು ಮತ್ತು ಸ್ನೇಹಿತರು ಆನೇಕಲ್ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. “ಕಣ್ಣು ನೋವಿನ ಬಗ್ಗೆ ನಮಗೆ ತಿಳಿಸಿಯೇ ಆಕೆ ರಜೆ ಮಾಡಿದ್ದಳು. ಹಗಲು ರಾತ್ರಿ ಓದಿ ವೈದ್ಯೆಯಾಗುವ ಕನಸು ಕಂಡಿದ್ದ ಮಗಳ ಸಾವಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರೇ ಕಾರಣ. ಅವರಿಗೆ ಶಿಕ್ಷೆಯಾಗಬೇಕು” ಎಂದು ಮೃತಳ ತಾಯಿ ಪರಿಮಳಾ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

 

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ