ಮೈಸೂರು: ತವರಿಗೆ ಬಂದರೂ ಬಿಡದ ಪತಿ ಕಾಟ; ಪತ್ನಿಯನ್ನೇ ಹೊಡೆದು ಕೊಂದ ಮದ್ಯವ್ಯಸನಿ ಗಂಡ! - Mahanayaka
10:09 PM Saturday 10 - January 2026

ಮೈಸೂರು: ತವರಿಗೆ ಬಂದರೂ ಬಿಡದ ಪತಿ ಕಾಟ; ಪತ್ನಿಯನ್ನೇ ಹೊಡೆದು ಕೊಂದ ಮದ್ಯವ್ಯಸನಿ ಗಂಡ!

nanjanagudu
09/01/2026

ನಂಜನಗೂಡು: ಪತಿಯ ಹಿಂಸೆ ತಾಳಲಾರದೆ ತವರು ಮನೆಗೆ ಬಂದು ನೆಲೆಸಿದ್ದ ಪತ್ನಿಯನ್ನೇ ಪತಿ ಮರದ ತುಂಡಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ: ಮೃತ ಮಹಿಳೆಯನ್ನು ಸುಧಾ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 13 ವರ್ಷಗಳ ಹಿಂದೆ ಮಲ್ಲಹಳ್ಳಿ ಗ್ರಾಮದ ಮಹೇಶ್ ಜೊತೆ ಸುಧಾ ಅವರ ವಿವಾಹವಾಗಿತ್ತು. ಆದರೆ ಮಹೇಶ್ ಮದ್ಯವ್ಯಸನಿಯಾಗಿದ್ದು, ಪತ್ನಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಮದ್ಯಪಾನದ ಜೊತೆಗೆ ಇಸ್ಪೀಟ್ ಆಟದಂತಹ ದುಶ್ಚಟಗಳಿಗೆ ಬಲಿಯಾಗಿದ್ದ ಮಹೇಶ್, ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದನು. ಪತಿಯ ಕಿರುಕುಳ ಸಹಿಸಲಾರದೆ ಸುಧಾ ಕಳೆದ ಎರಡು ವರ್ಷಗಳಿಂದ ಮಕ್ಕಳೊಂದಿಗೆ ಕಳಲೆ ಗ್ರಾಮದಲ್ಲಿದ್ದ ತನ್ನ ತವರು ಮನೆಯಲ್ಲಿ ನೆಲೆಸಿದ್ದರು.

 

ಮಹೇಶ್ ಪದೇ ಪದೇ ಸುಧಾ ಅವರ ಮನೆಗೆ ಬಂದು ತನ್ನೊಂದಿಗೆ ಸಂಸಾರಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ. ಕಳೆದ ವಾರವೂ ಇದೇ ವಿಷಯವಾಗಿ ಗಲಾಟೆ ಮಾಡಿದ್ದ. ಆದರೆ ಮಹೇಶ್‌ ನ ನಡವಳಿಕೆಯಿಂದ ಬೇಸತ್ತಿದ್ದ ಸುಧಾ ಆತನೊಂದಿಗೆ ಹೋಗಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹೇಶ್, ಗಲಾಟೆ ನಡೆಸಿ ಮರದ ತುಂಡಿನಿಂದ ಸುಧಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ನಂತರ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹೇಶ್‌ನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ