35 ವರ್ಷವಾದ್ರೂ ಮದುವೆ ಮಾಡಿಲ್ಲವೆಂದು ತಂದೆಯನ್ನೇ ಹೊಡೆದು ಕೊಂದ ಪುತ್ರ!
ಚಿತ್ರದುರ್ಗ: ತನಗೆ 35 ವರ್ಷ ವಯಸ್ಸಾದರೂ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಮಗನೊಬ್ಬ ತನ್ನ ಹೆತ್ತ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಅತಿಘಟ್ಟ ಗ್ರಾಮದ ನಿವಾಸಿ ಸಣ್ಣ ಲಿಂಗಪ್ಪ (65) ಕೊಲೆಯಾದ ದುರ್ದೈವಿ. ಇವರ ಪುತ್ರ ನಿಂಗರಾಜ್ (35) ತಂದೆಯನ್ನು ಕೊಲೆ ಮಾಡಿದ ಆರೋಪಿ. ಬುಧವಾರ ರಾತ್ರಿ ತಂದೆ–ಮಗನ ನಡುವೆ ಮದುವೆ ವಿಷಯವಾಗಿ ಜೋರಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ನಿಂಗರಾಜ್ ಮಲಗಿದ್ದ ತಂದೆಯ ತಲೆಗೆ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸಣ್ಣ ಲಿಂಗಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ನಿಂಗರಾಜ್ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ವಿಷಯವಾಗಿ ತಂದೆ ಪದೇ ಪದೇ ಬುದ್ಧಿವಾದ ಹೇಳುತ್ತಿದ್ದರು. ಇತ್ತ ನಿಂಗರಾಜ್ ತನಗೆ ಮದುವೆ ಮಾಡುವಂತೆ ತಂದೆಯ ಜೊತೆ ಸದಾ ಜಗಳವಾಡುತ್ತಿದ್ದನು. “ನೀನು ಕೆಲಸಕ್ಕೆ ಹೋಗುತ್ತಿಲ್ಲ, ನಿನಗೆ ಯಾರು ಹೆಣ್ಣು ಕೊಡುತ್ತಾರೆ?” ಎಂದು ತಂದೆ ಕೇಳುತ್ತಿದ್ದದ್ದು ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಮೃತ ಸಣ್ಣ ಲಿಂಗಪ್ಪನವರ ಮತ್ತೊಬ್ಬ ಮಗ ಮಾರುತಿ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ ಪಿ ರಂಜಿತ್ ಕುಮಾರ್ ಬಂಡಾರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ನಿಂಗರಾಜ್ ನನ್ನು ಪೊಲೀಸರು ಬಂಧಿಸಿದ್ದು, ಆತನ ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ ಐಆರ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























