ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ನ ತಾಮ್ರದ ಹೊದಿಕೆ ಕಳವು; ಇಬ್ಬರು ಆರೋಪಿಗಳ ಬಂಧನ
ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪ್ರಸಿದ್ಧ ಪರಶುರಾಮ ಥೀಮ್ ಪಾರ್ಕ್‌ನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಯಾರು? ಮಂಗಳೂರು ಮೂಲದ ಕಳವಾರು ಚರ್ಚ್ ಗುಡ್ಡೆಯ ಆರೀಫ್ ಅಲಿಯಾಸ್ ಮುನ್ನಾ (37) ಮತ್ತು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು. ಇವರ ಪೈಕಿ ಆರೀಫ್ ವಿರುದ್ಧ ಈಗಾಗಲೇ ಪಡುಬಿದ್ರೆ, ಬ್ರಹ್ಮಾವರ, ಉಡುಪಿ ನಗರ ಮತ್ತು ಮುಲ್ಕಿ ಸೇರಿದಂತೆ ವಿವಿಧ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಮೀದ್ ವಿರುದ್ಧ ಬಜ್ಪೆ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ಪ್ರಕರಣಗಳಿವೆ.
ಪ್ರಕರಣದ ಹಿನ್ನೆಲೆ: ಜನವರಿ 3ರಂದು ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು, ಮೇಲ್ಚಾವಣಿಯಲ್ಲಿದ್ದ ತಾಮ್ರದ ಹೊದಿಕೆಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ್ ಅವರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
ವಶಪಡಿಸಿಕೊಂಡ ಸೊತ್ತುಗಳು: ಬಂಧಿತರಿಂದ ಪೊಲೀಸರು ಸುಮಾರು 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, 1,200 ರೂ. ಮೌಲ್ಯದ ಎರಡು ಸೀಲಿಂಗ್ ಫ್ಯಾನ್‌ಗಳು, ಕೃತ್ಯಕ್ಕೆ ಬಳಸಿದ್ದ ಒಂದು ಗೂಡ್ಸ್ ಆಟೋ ರಿಕ್ಷಾ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾರ್ಕಳ ಉಪವಿಭಾಗದ ಪ್ರಭಾರ ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























