ಮಂಗಳೂರು: ‘ಬಾಂಗ್ಲಾದೇಶಿ’ ಎಂದು ಹಣೆಪಟ್ಟಿ ಕಟ್ಟಿ ವಲಸೆ ಕಾರ್ಮಿಕನ ಮೇಲೆ ಹಲ್ಲೆ; ಮೂವರು ಆರೋಪಿಗಳ ಬಂಧನ
ಮಂಗಳೂರು: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ‘ಬಾಂಗ್ಲಾದೇಶದವನು’ ಎಂದು ಆರೋಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೂಳೂರು ಗ್ರಾಮದ ನಿವಾಸಿಗಳಾದ ರತೀಶ್ ದಾಸ್ ಅಲಿಯಾಸ್ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು.
ಘಟನೆಯ ವಿವರ: ಜನೆವರಿ 11ರಂದು ಸಂಜೆ ಸುಮಾರು 6:05ರ ವೇಳೆಗೆ ಈ ಘಟನೆ ನಡೆದಿದೆ. ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬ ವಲಸೆ ಕಾರ್ಮಿಕ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ನಾಲ್ವರು ಆರೋಪಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. “ನೀನು ಹಿಂದೂನಾ ಅಥವಾ ಮುಸ್ಲಿಮಾನಾ?” ಎಂದು ಪ್ರಶ್ನಿಸಿ ಜನಾಂಗೀಯವಾಗಿ ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, “ನೀನು ಬಾಂಗ್ಲಾದೇಶದವನು” ಎಂದು ಆಪಾದಿಸಿ ಕಾರ್ಮಿಕನ ಮೇಲೆ ಸಾರಣೆ ಮಾಡುವ ತಾಪಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಜನೆವರಿ 12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೋಮವಾರ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























