ದೇವಸ್ಥಾನಕ್ಕೆ ಹೋದ ಮಗ ಮರಳಿ ಬರಲೇ ಇಲ್ಲ; ಬೆಳ್ತಂಗಡಿಯಲ್ಲಿ ಬಾಲಕನ ನಿಗೂಢ ಸಾವು!
ಬೆಳ್ತಂಗಡಿ: ಧನು ಪೂಜೆಗಾಗಿ ಮುಂಜಾನೆ ದೇವಸ್ಥಾನಕ್ಕೆ ತೆರಳಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿ, ಬಳಿಕ ಮನೆಯ ಸಮೀಪದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾದ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15) ಮೃತಪಟ್ಟ ಬಾಲಕ. ಜನವರಿ 14ರಂದು ಮುಂಜಾನೆ ಸುಮಾರು 4 ಗಂಟೆಗೆ ಸುಮಂತ್ ನಾಳ ದೇವಸ್ಥಾನದಲ್ಲಿ ನಡೆಯುವ ಧನು ಪೂಜೆಗಾಗಿ ಮನೆಯಿಂದ ಹೊರಟಿದ್ದನು. ಪ್ರತಿದಿನ ಮೂವರು ಸ್ನೇಹಿತರು ಒಟ್ಟಿಗೆ ಹೋಗುತ್ತಿದ್ದರು, ಆದರೆ ಅಂದು ಸುಮಂತ್ ಬರಲು ತಡವಾದ ಕಾರಣ ಉಳಿದ ಇಬ್ಬರು ಸ್ನೇಹಿತರು ದೇವಸ್ಥಾನಕ್ಕೆ ತೆರಳಿದ್ದರು.
ಸುಮಂತ್ ದೇವಸ್ಥಾನಕ್ಕೆ ಬಾರದಿದ್ದಾಗ ಸಂಶಯಗೊಂಡ ಸ್ನೇಹಿತರು ಆತನ ಮನೆಗೆ ಕರೆ ಮಾಡಿದರು. ಮನೆಯವರು ಆತ ಮುಂಜಾನೆಯೇ ಹೊರಟಿದ್ದಾನೆ ಎಂದು ತಿಳಿಸಿದಾಗ ಆತಂಕಗೊಂಡ ಗ್ರಾಮಸ್ಥರು ಹಾಗೂ ಮನೆಯವರು ಹುಡುಕಾಟ ಆರಂಭಿಸಿದರು. ಈ ಸಂದರ್ಭದಲ್ಲಿ ಬಾಲಕ ಹೋಗುವ ದಾರಿಯ ಕೆರೆಯ ಬಳಿ ರಕ್ತದ ಕಲೆಗಳು ಕಂಡುಬಂದಿವೆ. ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ನೆರವಿನೊಂದಿಗೆ ಹುಡುಕಾಟ ನಡೆಸಿದಾಗ, ಸುಮಾರು 11:30ರ ವೇಳೆಗೆ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
ಸಾವಿನ ಬಗ್ಗೆ ಅನುಮಾನ: ಬಾಲಕನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಸಿಕ್ಕಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಅಪಘಾತವೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಸಾವು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ ಮಠ, ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ., ತಹಶೀಲ್ದಾರ್ ಪೃಥ್ವಿ ಸಾನಿಕಂ, ಬಿಒ ತಾರಕೇಸರಿ ಹಾಗೂ ಶಾಲಾ ಶಿಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳಾದ ಐಜಿಪಿ ಹಾಗೂ ಎಸ್‌ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























