ಲಕ್ಕಿ ಸ್ಕೀಮ್ ಕಂಪನಿಗಳ ವಂಚನೆ: ಕೂಡಲೇ ಬೀಗ ಜಡಿಯಲು ಒತ್ತಾಯಿಸಿ ಪ್ರತಿಭಟನೆ - Mahanayaka
7:44 PM Thursday 15 - January 2026

ಲಕ್ಕಿ ಸ್ಕೀಮ್ ಕಂಪನಿಗಳ ವಂಚನೆ: ಕೂಡಲೇ ಬೀಗ ಜಡಿಯಲು ಒತ್ತಾಯಿಸಿ ಪ್ರತಿಭಟನೆ

15/01/2026

ಮಂಗಳೂರು: ಸಾರ್ವಜನಿಕರಿಗೆ ಮನೆ, ಕಾರು ಮತ್ತು ಚಿನ್ನದ ಆಮಿಷವೊಡ್ಡಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಲಾಗುತ್ತಿದೆ, ಜಿಲ್ಲೆಯ ‘ಲಕ್ಕಿ ಸ್ಕೀಮ್’ ಕಂಪನಿಗಳನ್ನು ಕೂಡಲೇ ಬಂದ್ ಮಾಡಬೇಕು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಒತ್ತಾಯಿಸಿದ್ದಾರೆ.

ನಗರದ ಕ್ಲಾಕ್ ಟವರ್ ಬಳಿ ಲಕ್ಕಿ ಸ್ಕೀಮ್ ಕಂಪನಿಗಳಿಂದ ವಂಚನೆಗೊಳಗಾದ ಸಂತ್ರಸ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಯಮಗಳ ಉಲ್ಲಂಘನೆ: ಈ ಕಂಪನಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ಕಾನೂನುಬಾಹಿರವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿವೆ.  ಮಂಗಳೂರು ನಗರವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಇಂತಹ ‘ಬ್ಲೇಡ್’ ಕಂಪನಿಗಳಿದ್ದು, ಸಾವಿರಾರು ಕೋಟಿ ರೂಪಾಯಿಗಳನ್ನು ಜನರಿಂದ ಲೂಟಿ ಮಾಡಲಾಗಿದೆ ಎಂದು ಇಮ್ತಿಯಾಝ್ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭವಾದ ಈ ಜಾಲವು ಈಗ ಇತರ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಲಕ್ಕಿ ಸ್ಕೀಮ್‌ ಗಳು ಅಕ್ರಮವಾಗಿದ್ದು, ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಅವರು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, “ಬಡವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಹೆಣ್ಣು ಮಕ್ಕಳ ಮದುವೆಗಾಗಿ ಕೂಡಿಟ್ಟ ಹಣವನ್ನು ಈ ಕಂಪನಿಗಳು ನುಂಗಿ ಹಾಕಿವೆ. ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ಸಕಾಲದಲ್ಲಿ ಎಚ್ಚೆತ್ತುಕೊಂಡಿದ್ದರೆ ಇಷ್ಟು ದೊಡ್ಡ ಮಟ್ಟದ ಹಗರಣ ನಡೆಯುತ್ತಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ