ನೈರ್ಮಲ್ಯ ಲೋಪ: ಡೊಮಿನೋಸ್ ನ 4 ಶಾಖೆಗಳ ಪರವಾನಗಿ ಅಮಾನತು - Mahanayaka
12:48 PM Thursday 13 - August 2026

ನೈರ್ಮಲ್ಯ ಲೋಪ: ಡೊಮಿನೋಸ್ ನ 4 ಶಾಖೆಗಳ ಪರವಾನಗಿ ಅಮಾನತು

Dominos.jpg
13/08/2026

ಮುಂಬೈ: ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ರಾಜ್ಯಾದ್ಯಂತ ಪ್ರಸಿದ್ಧ ಫಾಸ್ಟ್ ಫುಡ್ ಸರಣಿ (Food Chain) ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ನೈರ್ಮಲ್ಯದ ತೀವ್ರ ಅಭಾವ ಮತ್ತು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಡೊಮಿನೋಸ್ ಪಿಜ್ಜಾದ (Domino’s) 4 ಶಾಖೆಗಳ ಆಹಾರ ಪರವಾನಗಿಯನ್ನು (Licence) ಅಮಾನತುಗೊಳಿಸಿದೆ.

ಅಮಾನತುಗೊಂಡಿರುವ ಶಾಖೆಗಳಲ್ಲಿ ಮುಂಬೈನ ವಿಲೇ ಪಾರ್ಲೆ ವೆಸ್ಟ್, ಬೋರಿವಲಿ ವೆಸ್ಟ್ ಮತ್ತು ಘಾಟ್ಕೋಪರ್ನ ಆರ್–ಸಿಟಿ ಮಾಲ್ನಲ್ಲಿರುವ ಮೂರು ಪ್ರಮುಖ ಡೊಮಿನೋಸ್ ಶಾಖೆಗಳು ಸೇರಿವೆ. ಇದರೊಂದಿಗೆ ಸತಾರಾ ಜಿಲ್ಲೆಯ ಮಲ್ಕಾಪುರದಲ್ಲಿರುವ ಡೊಮಿನೋಸ್ ಮಳಿಗೆಯ ಪರವಾನಗಿಯನ್ನೂ ಎಫ್ಡಿಎ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
ದಾಳಿಯ ವೇಳೆ ಅಡುಗೆಮನೆಯ ನೆಲ ಹಾಗೂ ಹಿಂಭಾಗದ ಬಾಗಿಲುಗಳು ಅತ್ಯಂತ ಕೊಳಕಾಗಿದ್ದವು. ಆಹಾರ ತಯಾರಿಸುವ ಜಾಗದಲ್ಲಿ ನೊಣ, ಜಿರಳೆ ಸೇರಿದಂತೆ ಕ್ರಿಮಿಕೀಟಗಳ ಹಾವಳಿ ಕಂಡುಬಂದಿದೆ. ಸಾಸ್ (Sauces), ಖಾರದ ಪುಡಿ (Chili flakes) ಹಾಗೂ ಒರೆಗಾನೋ ಪ್ಯಾಕೆಟ್ಗಳ ಮೇಲೆ ಬಳಕೆಯ ಕೊನೆಯ ದಿನಾಂಕ (Expiry Date) ನಮೂದಿಸಿರಲಿಲ್ಲ. ಶೀತಲೀಕರಿಸಿದ (Frozen Foods) ಆಹಾರಕ್ಕೆ ಸರಿಯಾದ ತಾಪಮಾನ ಕಾಯ್ದುಕೊಳ್ಳದಿರುವುದು ಹಾಗೂ ನೀರಿನ ಶುದ್ಧತೆ ಮತ್ತು ಸಿಬ್ಬಂದಿಯ ಆರೋಗ್ಯದ ದಾಖಲೆಗಳನ್ನು ನಿರ್ವಹಿಸದೇ ಇರುವುದು ಕಂಡು ಬಂದಿತ್ತು.

ಎಫ್ಡಿಎ ಅಧಿಕಾರಿಗಳು ಮುಂಬೈ ಸೇರಿದಂತೆ ರಾಜ್ಯದ ವಿವಿಧೆಡೆ ಮೆಕ್ಡೊನಾಲ್ಡ್ಸ್, ಕೆಎಫ್ಸಿ, ಪಜ್ಜಾ ಹಟ್, ಬರ್ಗರ್ ಕಿಂಗ್, ಸಬ್ವೇ, ಸ್ಟಾರ್ಬಕ್ಸ್ ಮತ್ತು ಮೊಂಗಿನಿಸ್ ಸೇರಿದಂತೆ ಒಟ್ಟು 104 ಪ್ರಮುಖ ಆಹಾರ ಮಳಿಗೆಗಳ ಮೇಲೆ ಪರಿಶೀಲನೆ ನಡೆಸಿದ್ದಾರೆ.

ನಿಯಮ ಪಾಲಿಸದ 95 ಮಳಿಗೆಗಳಿಗೆ ಕೊರತೆಗಳನ್ನು ಸರಿಪಡಿಸಿಕೊಳ್ಳಲು ‘ಸುಧಾರಣಾ ನೋಟಿಸ್’ ನೀಡಲಾಗಿದೆ. ಯಾವುದೇ ಸಿಂಧು ಪರವಾನಗಿ ಇಲ್ಲದೆ ನಡೆಸಲಾಗುತ್ತಿದ್ದ 2 ಮಳಿಗೆಗಳಿಗೆ ‘ವ್ಯಾಪಾರ ಸ್ಥಗಿತಗೊಳಿಸುವ’ (Stop Business) ನೋಟಿಸ್ ಜಾರಿಗೊಳಿಸಲಾಗಿದೆ.

ಕರಾಡ್ನಲ್ಲಿ ಸಫೈರ್ ಫುಡ್ಸ್ ಇಂಡಿಯಾ ಸಂಸ್ಥೆಯು ನಡೆಸುತ್ತಿದ್ದ ಕೆಎಫ್ ಸಿ/ಟ್ಯಾಕೋ ಬೆಲ್ ಮಳಿಗೆಯ ಲೈಸೆನ್ಸ್ ಅನ್ನು ಸಹ ನೈರ್ಮಲ್ಯದ ಅಭಾವದಿಂದಾಗಿ ಅಮಾನತುಗೊಳಿಸಲಾಗಿದೆ.

ಇದರ ಹೊರತಾಗಿ, ರಾಜ್ಯಾದ್ಯಂತ 120 ಹೋಟೆಲ್, ರೆಸ್ಟೋರೆಂಟ್ ಮತ್ತು ಧಾಬಾಗಳ ಮೇಲೆ ತಪಾಸಣೆ ನಡೆಸಿ 11 ಮಳಿಗೆಗಳ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಕಳಪೆ ಗುಣಮಟ್ಟದ ಹಾಲು, ಖಾದ್ಯ ತೈಲ ಹಾಗೂ ನಿಷೇಧಿತ ಗುಟ್ಕಾ-ಪಾನ್ಮಸಾಲಾ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ