ಭಾರತ ನಮ್ಮ ಆಪ್ತಮಿತ್ರ: ಇಂಧನ ಸಂಕಷ್ಟದ ನಡುವೆ ಭಾರತ ಸಿಹಿ ಸುದ್ದಿ ನೀಡಿದ ಇರಾನ್
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಇರಾನ್ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತಕ್ಕೆ ಇರಾನ್ ಒಂದು ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ಭಾರತೀಯ ಹಡಗುಗಳಿಗೆ ಶೀಘ್ರದಲ್ಲೇ ‘ಸುರಕ್ಷಿತ ಮಾರ್ಗ’ (Safe Passage) ಕಲ್ಪಿಸಿಕೊಡುವ ಸೂಚನೆಯನ್ನು ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ನೀಡಿದ್ದಾರೆ.
ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ಅವರು ಮಾತನಾಡುತ್ತಾ, “ಭಾರತವು ಇರಾನ್ ನ ಅತ್ಯಂತ ನಿಕಟ ಮಿತ್ರ ರಾಷ್ಟ್ರವಾಗಿದೆ. ಪ್ರಾದೇಶಿಕವಾಗಿ ಎರಡೂ ದೇಶಗಳು ಸಮಾನ ಹಿತಾಸಕ್ತಿಗಳನ್ನು ಹೊಂದಿವೆ,” ಎಂದು ಪುನರುಚ್ಚರಿಸಿದ್ದಾರೆ.
ಸಮುದ್ರ ಮಾರ್ಗದಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ಇರುವ ಅಡೆತಡೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಮುಂದಿನ ಎರಡರಿಂದ ಮೂರು ಗಂಟೆಗಳಲ್ಲೇ ಅಥವಾ ಅತೀ ಶೀಘ್ರದಲ್ಲೇ ನೀವು ಇದರ ಬದಲಾವಣೆಯನ್ನು ನೋಡಲಿದ್ದೀರಿ,” ಎಂದು ಭರವಸೆ ನೀಡಿದ್ದಾರೆ.
ಇತ್ತೀಚಿನ ಯುದ್ಧದ ಭೀತಿಯಿಂದಾಗಿ ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರ ಮತ್ತು ತೈಲ ಪೂರೈಕೆಗೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಭಾರತವು ಇಂಧನಕ್ಕಾಗಿ ಈ ಮಾರ್ಗವನ್ನೇ ಅವಲಂಬಿಸಿರುವುದರಿಂದ, ಇರಾನ್ನ ಈ ನಿರ್ಧಾರವು ಭಾರತದ ಆರ್ಥಿಕತೆಗೆ ಮತ್ತು ಇಂಧನ ಭದ್ರತೆಗೆ ದೊಡ್ಡ ಸಮಾಧಾನ ತಂದಿದೆ.
ಇದೇ ವೇಳೆ ಇರಾನ್ನ ಸುಪ್ರೀಂ ಲೀಡರ್ ಅವರ ಪ್ರತಿನಿಧಿ ಡಾ. ಅಬ್ದುಲ್ ಮಜಿದ್ ಹಕೀಮ್ ಇಲಾಹಿ ಅವರು ಮಾತನಾಡಿ, “ವಿಶ್ವದ ನಾಯಕರು ಅಮೆರಿಕದ ಮೇಲೆ ಒತ್ತಡ ಹೇರಬೇಕು ಮತ್ತು ಇಸ್ರೇಲ್ ನಡೆಸುತ್ತಿರುವ ಅನ್ಯಾಯದ ಯುದ್ಧವನ್ನು ನಿಲ್ಲಿಸಬೇಕು. ನಾವು ಶಾಂತಿಯನ್ನು ಬಯಸುತ್ತೇವೆ ಆದರೆ ನಮ್ಮ ಘನತೆಯನ್ನು ಬಿಟ್ಟುಕೊಡುವುದಿಲ್ಲ,” ಎಂದು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಉಲ್ಬಣಗೊಳ್ಳುತ್ತಿರುವ ಸಂಘರ್ಷದಿಂದಾಗಿ ಸಮುದ್ರ ಮಾರ್ಗಗಳಲ್ಲಿ ಸಂಚರಿಸುವ ಹಡಗುಗಳಿಗೆ ಭದ್ರತೆಯ ಭೀತಿ ಎದುರಾಗಿತ್ತು. ವಿಶೇಷವಾಗಿ ಭಾರತದ ಎಲ್ಪಿಜಿ (LPG) ಮತ್ತು ಕಚ್ಚಾ ತೈಲ ಪೂರೈಕೆಯ ಮೇಲೆ ಇದರ ಪರಿಣಾಮ ಬೀರುವ ಆತಂಕವಿತ್ತು. ಈಗ ಇರಾನ್ನ ಈ ಧನಾತ್ಮಕ ಸ್ಪಂದನೆಯು ಭಾರತಕ್ಕೆ ರಾಜತಾಂತ್ರಿಕವಾಗಿ ಲಭಿಸಿದ ದೊಡ್ಡ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























