ವಿಮಾನದಲ್ಲಿ ಅಸಭ್ಯ ವರ್ತನೆ: ಕ್ಯಾಬಿನ್ ಸಿಬ್ಬಂದಿಗೆ ಒದ್ದು, ಅಸಭ್ಯ ಬೆರಳು ತೋರಿಸಿದ ಪ್ರಯಾಣಿಕನ ವಿರುದ್ಧ ಕೇಸ್! - Mahanayaka

ವಿಮಾನದಲ್ಲಿ ಅಸಭ್ಯ ವರ್ತನೆ: ಕ್ಯಾಬಿನ್ ಸಿಬ್ಬಂದಿಗೆ ಒದ್ದು, ಅಸಭ್ಯ ಬೆರಳು ತೋರಿಸಿದ ಪ್ರಯಾಣಿಕನ ವಿರುದ್ಧ ಕೇಸ್!

hyderabad flight.jpg
18/06/2026

ಹೈದರಾಬಾದ್: ಫ್ರಾಂಕ್ ಫರ್ಟ್ನಿಂದ ಹೈದರಾಬಾದ್ ಗೆ ಬರುತ್ತಿದ್ದ ಲುಫ್ಥಾನ್ಸ (Lufthansa) ವಿಮಾನದಲ್ಲಿ ಗೂಂಡಾವರ್ತನೆ ತೋರಿದ ಸತೀಶ್ ಕುಮಾರ್ ಎಂಬ ಪ್ರಯಾಣಿಕನ ವಿರುದ್ಧ ಹೈದರಾಬಾದ್ ಆರ್ ಜಿಐಎ (RGIA) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ವರದಿಗಳ ಪ್ರಕಾರ, ವಿಮಾನದ ಕ್ಯಾಬಿನ್ ಸಿಬ್ಬಂದಿಯಾದ 59 ವರ್ಷದ ಪೀಟರ್ ಬೌಸರ್ (ಜರ್ಮನ್ ಪ್ರಜೆ) ಎಂಬುವವರು ವಿಮಾನದ ಪ್ಯಾಸೇಜ್ನಲ್ಲಿ ಟ್ರಾಲಿಯನ್ನು ತಳ್ಳಿಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಕಾಲು ಚಾಚಿ ಕುಳಿತಿದ್ದ ಸತೀಶ್ ಕುಮಾರ್ ಎಂಬ ಪ್ರಯಾಣಿಕನ ಕಾಲಿಗೆ ಟ್ರಾಲಿ ಆಕಸ್ಮಿಕವಾಗಿ ತಗುಲಿದೆ.

ತಕ್ಷಣವೇ ಕ್ಯಾಬಿನ್ ಸಿಬ್ಬಂದಿ ಪೀಟರ್ ಅವರು ಪ್ರಯಾಣಿಕನಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೂ ಕೋಪಗೊಂಡ ಸತೀಶ್ ಕುಮಾರ್, ಪೀಟರ್ ಅವರ ಕಾಲಿಗೆ ಬಲವಾಗಿ ಒದ್ದಿದ್ದಾರೆ. ಇದರಿಂದಾಗಿ ಪೀಟರ್ ಅವರ ಕಾಲಿಗೆ ಗಾಯವಾಗಿದೆ. ಆ ಬಳಿಕ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಪ್ರಯಾಣಿಕನ ಉದ್ಧಟತನ ಮುಂದುವರಿದಿದೆ.

ಇಷ್ಟೇ ಅಲ್ಲದೆ, ವಿಮಾನವು ಹೈದರಾಬಾದ್ ನಲ್ಲಿ ಲ್ಯಾಂಡ್ ಆಗುವ ಮುನ್ನ ಪೀಟರ್ ಅವರು ಸತೀಶ್ ಕುಮಾರ್ಗೆ ತಮ್ಮ ಮುಂದಿರುವ ಟ್ರೇ ಟೇಬಲ್ ಅನ್ನು ಮಡಚುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದ ಪ್ರಯಾಣಿಕ, ಸಿಬ್ಬಂದಿಗೆ ಮಧ್ಯದ ಬೆರಳು ತೋರಿಸಿ (Middle Finger) ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಘಟನೆ ವಿಮಾನದಲ್ಲೇ ನಡೆದಿದ್ದರೂ, ಹೈದರಾಬಾದ್ ಗೆ ಬಂದಿಳಿದ ಬಳಿಕ ಆರ್ ಜಿಐಎ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿ ಸತೀಶ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 131 (ದೈಹಿಕ ಹಲ್ಲೆ) ಮತ್ತು ಸೆಕ್ಷನ್ 296 (ಅಸಭ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಹಿರಿಯ ನಾಗರಿಕರಾಗಿದ್ದು, ವಿಚಾರಣೆಗೆ ಹಾಜರಾಗಲು ಪೊಲೀಸರಿಂದ ಸ್ವಲ್ಪ ಸಮಯ ಕೋರಿದ್ದಾರೆ ಎಂದು ತಿಳಿದುಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ