ಕರೆಂಟ್ ಶಾಕ್, ಮೂತ್ರ ಕುಡಿಸುವುದು, ಲೈಂಗಿಕ ದೌರ್ಜನ್ಯ: ಆಶ್ರಮಕ್ಕೆ ಹೋದ ಭಕ್ತೆಯ ಮೇಲೆ ಅಘೋರ ಕೃತ್ಯ: ಗುರು, 6 ಸಹಚರರು ಅರೆಸ್ಟ್! - Mahanayaka

ಕರೆಂಟ್ ಶಾಕ್, ಮೂತ್ರ ಕುಡಿಸುವುದು, ಲೈಂಗಿಕ ದೌರ್ಜನ್ಯ: ಆಶ್ರಮಕ್ಕೆ ಹೋದ ಭಕ್ತೆಯ ಮೇಲೆ ಅಘೋರ ಕೃತ್ಯ: ಗುರು, 6 ಸಹಚರರು ಅರೆಸ್ಟ್!

guru.jpg
18/06/2026

ಪುಣೆ: ಕೌಟುಂಬಿಕ ಸಮಸ್ಯೆ ಹಾಗೂ ಆರೋಗ್ಯದ ತೊಂದರೆಗಳನ್ನು ನಿವಾರಿಸಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ದೈಹಿಕ, ಮಾನಸಿಕ ಮತ್ತು ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇಲೆ ಸ್ವಯಂಘೋಷಿತ ಗುರು ಮತ್ತು ಆತನ ಆರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನ ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮುಖ್ಯ ಆರೋಪಿಯನ್ನು ಹರಿಯಾಣ ಮೂಲದ ರಾಧಾಮೋಹನ್ ಮಿಶ್ರಾ (59) ಎಂದು ಗುರುತಿಸಲಾಗಿದೆ. ಈತ ಕಳೆದ ಎಂಟು ವರ್ಷಗಳಿಂದ ಪುಣೆಯ ವಾಗೋಲಿಯ ಉಬಾಳೆನಗರದ ಬಂಗಲೆಯೊಂದರಲ್ಲಿ ಆಶ್ರಮ ನಡೆಸುತ್ತಿದ್ದನು. ಈತನೊಂದಿಗೆ ಆತನ ಪುರುಷ ಸಹಚರ ಕನ್ವಲ್ ನಯನ್ (58) ಮತ್ತು ಆರು ಮಹಿಳಾ ಸಹಚರರನ್ನು ಪೊಲೀಸರು ಬುಧವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ನಗರದ ಪ್ರಮುಖ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ 41 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಸಂತ್ರಸ್ತೆಯ ತಂದೆ ವೈದ್ಯರಾಗಿದ್ದು, ಆರಂಭದಲ್ಲಿ ಅವರು ಆರೋಪಿ ಕನ್ವಲ್ ನಯನ್ ಮೂಲಕ ಈ ಗುರುವಿನ ಸಂಪರ್ಕಕ್ಕೆ ಬಂದಿದ್ದರು. ಕಾಲಕ್ರಮೇಣ ಇಡೀ ಕುಟುಂಬವೇ ಈತನ ಅಂಧ ಭಕ್ತರಾಗಿದ್ದರು. ತಾನು ದೈವಿಕ ಅವತಾರ ಎಂದು ನಂಬಿಸಿದ್ದ ಮಿಶ್ರಾ, ಕಳೆದ 15 ವರ್ಷಗಳಿಂದ (ಹರಿಯಾಣ ಮತ್ತು ಪುಣೆಯಲ್ಲಿ) ಮಹಿಳೆಯನ್ನು ಲೈಂಗಿಕವಾಗಿ ಹಾಗೂ ಮಾನಸಿಕವಾಗಿ ಶೋಷಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಭಕ್ತಿ ಮತ್ತು ವಿಧೇಯತೆಯನ್ನು ಪರೀಕ್ಷಿಸುವ ನೆಪದಲ್ಲಿ ಮಹಿಳೆಗೆ ಕರೆಂಟ್ ಶಾಕ್ ನೀಡುವುದು, ತನ್ನ ಮೂತ್ರವನ್ನು ಬಲವಂತವಾಗಿ ಕುಡಿಸುವುದು ಸೇರಿದಂತೆ ಅಘೋರಿ ಕೃತ್ಯಗಳನ್ನು ಎಸಗುತ್ತಿದ್ದ ಎನ್ನಲಾಗಿದೆ. ಮಹಿಳೆಯ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಆಕೆಯ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಈ ದೌರ್ಜನ್ಯದ ವಿರುದ್ಧ ಆಕೆ ತನ್ನ ಕುಟುಂಬದವರ ಬಳಿ ಅಳಲು ತೋಡಿಕೊಂಡಾಗ, ಗುರುವು ಕುಟುಂಬಸ್ಥರ ಕಿವಿ ಚುಚ್ಚಿ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ನಂಬಿಸಿ ಆಕೆಯ ವಿರುದ್ಧವೇ ತಿರುಗಿಬೀಳುವಂತೆ ಮಾಡಿದ್ದನು.

ಬಳಿಕ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಮಹಿಳೆಗೆ ಮದುವೆ ಮಾಡಿಸಿದ ಮಿಶ್ರಾ, ಮದುವೆಗೂ ಮುನ್ನ ಆಕೆಯನ್ನು ಓಡಿಹೋಗುವಂತೆ ಪ್ರಚೋದಿಸಿ ಕುಟುಂಬದ ಜೊತೆಗಿನ ಸಂಬಂಧ ಹಾಳಾಗುವಂತೆ ಮಾಡಿದ್ದನು. ಬಳಿಕ ಸಂತ್ರಸ್ತೆ ಮತ್ತು ಆಕೆಯ ಪತಿಯ ಖಾಸಗಿ ವಿಡಿಯೋಗಳನ್ನು ಪಡೆದು ಬ್ಲ್ಯಾಕ್ಮೇಲ್ ಮಾಡಿ, ಆಕೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಮಾಡಿದ್ದನು. ಅಷ್ಟೇ ಅಲ್ಲದೇ ಆಕೆಯ ಆಸ್ತಿಯನ್ನೂ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದನು ಎನ್ನಲಾಗಿದೆ.

ಗುರುವಿನ ಈ ಪೈಶಾಚಿಕ ಕಿರುಕುಳ ತಾಳಲಾರದೆ ಮಹಿಳೆ ಕೊನೆಗೂ ಕೋಣೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ ಆಶ್ರಮದಿಂದ ತಪ್ಪಿಸಿಕೊಂಡು ತನ್ನ ತವರು ಮನೆಗೆ ಮರಳಿದ್ದಾರೆ. ಅಲ್ಲಿ ಆಕೆ ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಾಗ ಕುಟುಂಬಸ್ಥರ ಮೂಢನಂಬಿಕೆ ಕಳಚಿಬಿದ್ದಿದೆ. ತಕ್ಷಣವೇ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

ಸುರಂಗ ಮಾರ್ಗ ಪತ್ತೆ, ಅಪಾರ ಆಸ್ತಿ ವಶ:

ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿದಾಗ ಆರೋಪಿ ಮಿಶ್ರಾ ಅಲ್ಲಿಂದ ತಪ್ಪಿಸಿಕೊಳ್ಳಲು ಭೂಗತ ಸುರಂಗ ಮಾರ್ಗವೊಂದನ್ನು ನಿರ್ಮಿಸುತ್ತಿದ್ದದ್ದು ಪತ್ತೆಯಾಗಿದೆ. ಇನ್ನು ಆಶ್ರಮದಿಂದ ಪೊಲೀಸರು 19 ಹಾರ್ಡ್ ಡಿಸ್ಕ್ಗಳು, 12 ಲ್ಯಾಪ್ಟಾಪ್ಗಳು, 1 ಟ್ಯಾಬ್ಲೆಟ್, 11 ಮೊಬೈಲ್ ಫೋನ್ಗಳು, ಡಿವಿಡಿ, ಸಿಡಿಗಳು, 23 ಪೆನ್ ಡ್ರೈವ್ಗಳು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6.5 ಲಕ್ಷ ರೂ. ನಗದು ಹಾಗೂ 10 ಜೀವಂತ ಗುಂಡುಗಳನ್ನು (ಬುಲೆಟ್) ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಕ್ರಿಮಿನಲ್ ಪಿತೂರಿ ಹಾಗೂ ಮಹಾರಾಷ್ಟ್ರದ ಮಾಟಮಂತ್ರ ನಿಷೇಧ ಕಾಯ್ದೆಯಡಿ ಖರಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮುಗ್ಧ ಮಹಿಳೆಯರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಶೋಷಿಸುತ್ತಿದ್ದ ಈ ಗುರುವಿಗೆ ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಾವಿರಾರು ಭಕ್ತರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ