ಜಲ್ಲಿಕಟ್ಟು ಗೂಳಿಗೆ ಬಲವಂತವಾಗಿ ಕೋಳಿ ತಿನ್ನಿಸಿದ ವಿಡಿಯೋ ಅಪ್ ಲೋಡ್ ಮಾಡಿದ ಯೂಟ್ಯೂಬರ್ ವಿರುದ್ಧ ಕೇಸ್! - Mahanayaka
8:01 PM Thursday 20 - November 2025

ಜಲ್ಲಿಕಟ್ಟು ಗೂಳಿಗೆ ಬಲವಂತವಾಗಿ ಕೋಳಿ ತಿನ್ನಿಸಿದ ವಿಡಿಯೋ ಅಪ್ ಲೋಡ್ ಮಾಡಿದ ಯೂಟ್ಯೂಬರ್ ವಿರುದ್ಧ ಕೇಸ್!

jallikattu bull
19/01/2024

ಚೆನ್ನೈ: ಜಲ್ಲಿಕಟ್ಟು ಸ್ಪರ್ಧೆಗೆ ಭಾಗವಹಿಸಿದ್ದ ಗೂಳಿಗೆ ಬಲವಂತವಾಗಿ ಜೀವಂತ ಕೋಳಿ ತಿನ್ನಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ ಯೂಟ್ಯೂಬರ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಗೂಳಿಯನ್ನು ಹಿಡಿದುಕೊಂಡು ಬಲವಂತವಾಗಿ ಜೀವಂತ ಕೋಳಿಯನ್ನು ಬಾಯಿಗೆ ಇಟ್ಟು ಜಗಿಸುವ ಕ್ರೌರ್ಯದ 2.48 ನಿಮಿಷಗಳ ವಿಡಿಯೋವನ್ನು ಯೂಟ್ಯೂಬರ್ ಅಪ್ ಲೋಡ್ ಮಾಡಿದ್ದ.

ಪೀಪಲ್ ಫಾರ್ ಕ್ಯಾಟಲ್ ಏಮ್ ಇಂಡಿಯಾ(ಪಿಎಫ್ ಸಿಐ) ಸಂಸ್ಥಾಪಕ ಅರುಣ್ ಪ್ರಸನ್ನ ಅವರು ಈ ವಿವಾದಿತ ವಿಡಿಯೋ ವಿರುದ್ಧ  ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆ ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ತಾರಮಂಗಲಂ ಪೊಲೀಸ್ ಇನ್ಸ್ ಪೆಕ್ಟರ್, ನಾವು ಎಫ್ ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಸುತ್ತಿದ್ದೇವೆ. ಇನ್ನು ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ದೂರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಆರೋಪವನ್ನೂ ಹೊರಿಸಲಾಗಿದೆ. ಇನ್ನೂ ಈ ಬಗ್ಗೆ ದೂರುದಾರ ಅರುಣ್ ಮಾತನಾಡಿ, ಈ ಘಟನೆ ಜೀವಂತ ಕೋಳಿ ಹಾಗೂ ಗೂಳಿ ಎರಡಕ್ಕೂ ಕೌರ್ಯ ಎಸಗಲಾಗಿದೆ. ಗೂಳಿ ಸಸ್ಯಾಹಾರಿ ಪ್ರಾಣಿಯಾಗಿದೆ. ಅದಕ್ಕೆ ಕೋಳಿ ತಿನ್ನಿಸುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು.

ಜಲ್ಲಿಕಟ್ಟು ಗೂಳಿಗಳು ಉತ್ತಮ ಪ್ರದರ್ಶನ ನೀಡಲು ಕೋಳಿಗಳನ್ನು ತಿನ್ನಿಸುತ್ತಾರೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗೆದ್ದ ಗೂಳಿಗಳು ಮತ್ತು ಮಾಲಿಕರು ಚಿನ್ನದ ನಾಣ್ಯವನ್ನು ಬಹುಮಾನವಾಗಿ ಪಡೆಯುತ್ತಾರೆ.

ಇತ್ತೀಚಿನ ಸುದ್ದಿ