ಹೆರಿಗೆ ವೇಳೆ ನವಜಾತ ಶಿಶು ಮೃತ್ಯು ಪ್ರಕರಣ: ಆಹೋ ರಾತ್ರಿ ಪ್ರತಿಭಟನೆ ತಾತ್ಕಾಲಿಕ ಅಂತ್ಯ

ಕುಂದಾಪುರ: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನ.20ರಂದು ಹೆರಿಗೆ ವೇಳೆ ನವಜಾತ ಶಿಶು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಸಂಜೆಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ಮಧ್ಯಾಹ್ನದ ವೇಳೆಗೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
ವೈದ್ಯರ ನಿರ್ಲಕ್ಷದಿಂದ ಶ್ರೀನಿವಾಸ ಖಾರ್ವಿ ಅವರ ಪತ್ನಿ ಜ್ಯೋತಿ ಅವರ ಹೆರಿಗೆ ವೇಳೆ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಸೋಮವಾರ ಸಂಜೆಯಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದರು
ಮಂಗಳವಾರ ಬೆಳಗ್ಗೆ ಪ್ರತಿಭಟನಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸ ಬೇಕಾಗಿ ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಈ ಬಗ್ಗೆ ಪರಿಶೀಲನೆ ನಡೆಸಿ ನುರಿತರ ತನಿಖಾ ತಂಡ ರಚಿಸಿ ತಪ್ಪಿದಲ್ಲಿ ಮುಂದೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ತಾತ್ಕಾಲಿಕವಾಗಿ ಧರಣಿಯನ್ನು ವಾಪಾಸ್ಸು ಪಡೆದು ಕೊಂಡರು. ಇದರಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಯಶವಂತ್ ಗಂಗೊಳ್ಳಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಓ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ತಾಲೂಕು ಆಸ್ಪತ್ರೆ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೋ ಹಾಜರಿದ್ದರು.
ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಭಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ವಿಶೇಷ ಭದ್ರತೆ ಒದಗಿಸಲಾಗಿತ್ತು.