ಬಸ್ ನಿಂದ ಬಿದ್ದು ‘ಏನೂ ಆಗಿಲ್ಲ’ ಎಂದು ಹೇಳಿ ಹೋಗಿದ್ದ ವ್ಯಕ್ತಿ ಸಾವು!

ಬಂಟ್ವಾಳ(Mahanayaka): ಖಾಸಗಿ ಬಸ್ ನಿಂದ ಬಿದ್ದಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದ್ದು, ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43) ಮೃತಪಟ್ಟವರಾಗಿದ್ದಾರೆ. ಜು.7ರಂದು ಬೆಳಗ್ಗೆ ವಿಟ್ಲ — ಮುಡಿಪು- ಮಂಗಳೂರು ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಸಿಗೆ ಕೊಡಂಗಾಯಿ ಎಂಬಲ್ಲಿ ಏರಿದ್ದ ಚಿದಾನಂದ, ಕುಡ್ತಮುಗೇರು ನಿಲ್ದಾಣ ತಲುಪುತ್ತಿದ್ದಂತೆ ಮೆಟ್ಟಿಲಿನಲ್ಲಿ ನಿಂತಿದ್ದು, ಈ ವೇಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ.
ಬಸ್ ನವರು ಉಪಚರಿಸಲು ಮುಂದಾದ ವೇಳೆ ನನಗೇನೂ ಆಗಿಲ್ಲ ಎಂದು ಹೇಳಿ ಸ್ಥಳದಿಂದ ತೆರಳಿದ್ದರು. ಆದರೆ, ಸಂಜೆ ಹಠಾತ್ ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಆದರೆ ಜು.8ರಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD