ಕಾಫಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ! - Mahanayaka
10:30 AM Saturday 23 - August 2025

ಕಾಫಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ!

dinesh
24/06/2025


Provided by

ಮೂಡಿಗೆರೆ: ಕಾಫಿ ತೋಟದ ಕೆಲಸದಿಂದ ಹಿಂತಿರುಗುತ್ತಿದ್ದಾಗ ಕಾರ್ಮಿಕನ ಮೇಲೆ ಕಾಡಾನೆ ನಡೆಸಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕಾಡಾನೆ ದಾಳಿಯಿಂದ ದಿನೇಶ್ (37 ವರ್ಷ) ಎಂಬ ಕಾರ್ಮಿಕ ಗಾಯಗೊಂಡಿದ್ದಾರೆ.

ಬೈದುವಳ್ಳಿ ಗ್ರಾಮದ ಮೂರ್ತೇಶ್ ಎಂಬುವವರ ತೋಟಕ್ಕೆ ಕೆಲಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಮೂಡಿಗೆರೆ ಸಮೀಪದ ಹೆಸಗಲ್ ಗ್ರಾಮದ ದಿನೇಶ್ ಹಾಗೂ ಇತರರು ಮೂರ್ತೇಶ್ ಅವರ ತೋಟದ ಕೆಲಸಕ್ಕೆ ಆಗಮಿಸಿದ್ದರು.

ಇಂದು ಮಧ್ಯಾಹ್ನ ಅಂದಾಜು 2 ಗಂಟೆ ಸಮಯದಲ್ಲಿ ತೋಟದ ಕೆಲಸ ಮುಗಿಸಿ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಹಿಂಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ದಿನೇಶ್ ಅವರನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ವಾಪಾಸ್ಸಾಗಿದೆ.

ಕಾಡಾನೆ ಎತ್ತಿ ಎಸೆದ ರಭಸಕ್ಕೆ ದಿನೇಶ್ ಅವರ ಬೆನ್ನು, ಕುತ್ತಿಗೆ ಮತ್ತು ತಲೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಈ ಸಂದರ್ಭದಲ್ಲಿ ತೋಟದ ಮಾಲೀಕ ಮೂರ್ತೇಶ್ ಮತ್ತು ಇತರೆ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ಗಾಯಗೊಂಡ ದಿನೇಶ್ ಅವರನ್ನು ತಕ್ಷಣ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದೆ. ದಿನೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ಮೂಡಿಗೆರೆ ಆರ್.ಎಫ್.ಓ. ಕಾವ್ಯ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಮತ್ತು ಗಾಯಾಳುವಿನ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.

ಬೈದುವಳ್ಳಿ, ಮೂಲರಹಳ್ಳಿ, ಗುತ್ತಿಹಳ್ಳಿ, ಕುಂಬರಡಿ ಮುಂತಾದ ಗ್ರಾಮಗಳಲ್ಲಿ ಕಾಡಾನೆಯೊಂದು ಕಳೆದ ಕೆಲವು ದಿನಗಳಿಂದ ಹಗಲು ರಾತ್ರಿಯೆನ್ನದೇ ಸಂಚರಿಸುತ್ತಿದೆ. ಇದರಿಂದ ಈ ಭಾಗದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಅರಣ್ಯ ಇಲಾಖೆ ಜೀವಹಾನಿ ಆಗುವ ಮೊದಲು ಈ ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ