ಹೆಣ್ಣು ಸಿಗದಿದ್ದಕ್ಕೆ ಮನನೊಂದು ಕುರಿಗಾಹಿ ಯುವಕ ಆತ್ಮಹತ್ಯೆ - Mahanayaka

ಹೆಣ್ಣು ಸಿಗದಿದ್ದಕ್ಕೆ ಮನನೊಂದು ಕುರಿಗಾಹಿ ಯುವಕ ಆತ್ಮಹತ್ಯೆ

chikkamagaluru
04/04/2026

ಚಿಕ್ಕಮಗಳೂರು: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ ಕುರಿಗಾಹಿ ಯುವಕನೊಬ್ಬ ಮದ್ಯ ಸೇವಿಸಿ, ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಭೈರಗೊಂಡನಹಳ್ಳಿ ಬಳಿ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮೂಲದ ಕುಮಾರ್ (26) ಮೃತಪಟ್ಟ ದುರ್ದೈವಿ. ಕುಮಾರ್ ಅವರು ಜೀವನೋಪಾಯಕ್ಕಾಗಿ ಕುರಿ ಮೇಯಿಸುವ ಕಾಯಕ ಮಾಡಿಕೊಂಡಿದ್ದರು. ಆದರೆ ಕಳೆದ ಕೆಲವು ಸಮಯದಿಂದ ತನಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿದ್ದ ಅವರು, ಇದೇ ವಿಚಾರವಾಗಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಹೆಣ್ಣು ಸಿಗದ ನೋವಿನಲ್ಲಿದ್ದ ಕುಮಾರ್, ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಮದ್ಯ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಮದ್ಯದ ಅಮಲಿನಲ್ಲಿಯೇ ಭೈರಗೊಂಡನಹಳ್ಳಿ ಬಳಿಯ ತೆಂಗಿನ ತೋಟವೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಯಗಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ