ನಗ್ನವಾಗಿ ಓಡಿ ಬಂದ ಯುವತಿ, ಆಕೆಯನ್ನು ಓಡಿಸಿಕೊಂಡು ಬಂದ ನಾಲ್ವರು ಪುರುಷರು: ಧರ್ಮಸ್ಥಳ ಸಮೀಪ ಮತ್ತೊಂದು ಘಟನೆಗೆ ಸಾಕ್ಷಿ! - Mahanayaka

ನಗ್ನವಾಗಿ ಓಡಿ ಬಂದ ಯುವತಿ, ಆಕೆಯನ್ನು ಓಡಿಸಿಕೊಂಡು ಬಂದ ನಾಲ್ವರು ಪುರುಷರು: ಧರ್ಮಸ್ಥಳ ಸಮೀಪ ಮತ್ತೊಂದು ಘಟನೆಗೆ ಸಾಕ್ಷಿ!

dharmasthala
20/07/2025


Provided by

ಬೆಳಿಗ್ಗೆ 3—4 ಗಂಟೆಯ ಸುಮಾರಿಗೆ ನಾನು ಲೋಡ್ ತರಲೆಂದು ಟಿಪ್ಪರ್ ನಲ್ಲಿ ಹೊರಟಿದ್ದೆ.  ಆ ಸಮಯದಲ್ಲಿ *ಸ್ಥಳ ಕಡೆಯಿಂದ 1 ಕಿ.ಮೀ. ದೂರದಲ್ಲಿ  ನಗ್ನವಾಗಿ, ದೇಹ ರಕ್ತ ಸಿಕ್ತಗೊಂಡು, ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಹುಡುಗಿಯೊಬ್ಬಳು ಓಡಿ ಬಂದಳು,  ಆಕೆಯ ವಯಸ್ಸು 18ರಿಂದ 25ರೊಳಗೆ ಇರಬಹುದು. ಆಕೆಯನ್ನು ಓಡಿಸಿಕೊಂಡು ನಾಲ್ವರು ಯುವಕರು ಕಾರಿನಲ್ಲಿ ಬರುತ್ತಿದ್ದರು. ಗಡ್ಡ ಮೀಸೆ ಕ್ಲೀನ್ ಶೇವ್ ಮಾಡಿದ್ದರು, ಯಾರೂ ಅಂಗಿ ಧರಿಸಿರಲಿಲ್ಲ, ಎಲ್ಲರೂ ಬಿಳಿ ಪಂಚೆ ಹಾಗೂ ಬಿಳಿ ಶಾಲು ಧರಿಸಿದ್ದರು. ಇಂತಹದ್ದೊಂದು ಭಯಾನಕ ಕಥೆಯನ್ನು ಧರ್ಮಸ್ಥಳ ಸಮೀಪದ ಟಿಪ್ಪರ್  ಚಾಲಕರೊಬ್ಬರು ಕೇರಳದ ಮಾಧ್ಯಮ ರಿಪೋರ್ಟರ್ ಜೊತೆಗೆ ಹಂಚಿಕೊಂಡಿದ್ದಾರೆ.


ಧರ್ಮಸ್ಥಳದ ವಿವಿಧೆಡೆಗಳಲ್ಲಿ ಅತ್ಯಾಚಾರ, ಕೊಲೆ ನಡೆಸಲಾಗಿರುವ ನೂರಾರು ಮೃತದೇಹಗಳನ್ನು ಹೂತಿಟ್ಟಿರುವುದಾಗಿ ಇತ್ತೀಚೆಗೆ ವ್ಯಕ್ತಿಯೊಬ್ಬ ಹೇಳಿಕೆ ನೀಡಿದ್ದ. ಇದರ ಬೆನ್ನಲ್ಲೇ ಇದೀಗ ಹಲವಾರು ಘಟನೆಗಳ ಬಗ್ಗೆ ಸ್ಥಳೀಯರು ನೋಡಿರುವ ವಿಚಾರಗಳನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಿಪೋರ್ಟರ್ ಎಂಬ ಕೇರಳ ಸುದ್ದಿ ವಾಹಿನಿ ಧರ್ಮಸ್ಥಳಕ್ಕೆ ಆಗಮಿಸಿ, ವ್ಯಕ್ತಿಯೊಬ್ಬರನ್ನು ಸಂದರ್ಶನ ನಡೆಸಿದ್ದು, ಅವರು ತಾವು ನೋಡಿರುವ ಶಾಕಿಂಗ್ ಘಟನೆಯೊಂದನ್ನು ವಿವರಿಸಿದ್ದಾರೆ. ಅಲ್ಲದೇ ಈ ಘಟನೆಯ ಬಗ್ಗೆ ಎಲ್ಲಾದರೂ ಸಾಕ್ಷಿ ಹೇಳಬೇಕಾದರೆ, ನಾನು ನೋಡಿರುವ ವಿಚಾರವನ್ನು ಹೇಳಲು ಸಿದ್ಧ ಎಂದು ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಮಲಯಾಳಿ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ತಾನು ಕಂಡ ಘಟನೆಯನ್ನು ವಿವರಿಸಿದರು… ಘಟನೆ ನಡೆದದ್ದು 2009—2010ರ ನಡುವಲ್ಲಿ. ಯುವತಿ ನಗ್ನವಾಗಿ ಓಡಿ ಬಂದಳು, ಆಕೆಯ ಮೈತುಂಬಾ ಗಾಯ, ರಕ್ತದ ಕಲೆಗಳಾಗಿದ್ದವು. ನನಗೆ ಹೆಡ್ ಲೈಟ್ ನಲ್ಲಿ ಯುವತಿ ಕಾಣುತ್ತಿದ್ದಳು. ಏನಿದು ಅಂತ ತಿಳಿದೇ ನಾನು ಗಾಡಿ ನಿಲ್ಲಿಸಿ ಕೆಳಗೆ ಇಳಿದು ಯಾರಮ್ಮ… ಅಂತ ಕೇಳಿದಾಗ ಯುವತಿ ರಸ್ತೆಯ ಎಡಭಾಗಕ್ಕೆ ಓಡಿ ಹೋದಳು. ಅದೇ ಸಮಯಕ್ಕೆ ಇಂಡಿಕಾ ಕಾರೊಂದು ಬಂತು, ಅದರಲ್ಲಿ ನಾಲ್ವರು ಯುವಕರು ಇದ್ದರು. ಅವರು ಎಲ್ಲರೂ ಗಡ್ಡ ಮೀಸೆ ಕ್ಲೀನ್ ಶೇವ್ ಮಾಡಿದ್ದರು, ಯಾರೂ ಅಂಗಿ ಧರಿಸಿರಲಿಲ್ಲ, ಎಲ್ಲರೂ ಬಿಳಿ ಪಂಚೆ ಹಾಗೂ ಬಿಳಿ ಶಾಲು ಧರಿಸಿದ್ದರು. ನನ್ನನ್ನು ನೋಡಿ, ಯಾಕೆ ಇಲ್ಲಿ ಗಾಡಿ ನಿಲ್ಲಿಸಿದ್ದೀಯಾ ಎಂದು ಕೇಳಿದರು. ಇಲ್ಲಿ ಒಂದು ಹುಡುಗಿ ನಗ್ನವಾಗಿ ಓಡಿ ಬಂದಳು, ದೇಹದಲ್ಲಿ ತುಂಬಾ ಗಾಯಗಳಾಗಿದೆ. ನಿಮಗೆ ರಕ್ಷಿಸಲು ಸಾಧ್ಯವಾದ್ರೆ ರಕ್ಷಿಸಿ ಎಂದೆ. ಈ ವೇಳೆ ಯಾವ ಕಡೆಗೆ ಆಕೆ ಓಡಿದ್ದಾಳೆ ಎಂದು ಅವರು ಕೇಳಿದಾಗ, ನಾನು ಆಕೆ ಬಲ ಕಡೆಗೆ ಓಡಿ ಹೋದಳು ಎಂದು ದಾರಿ ತಪ್ಪಿಸಿ ನಾನು ಹೇಳಿದೆ. ಈ ವೇಳೆ ಆಲೆನ್ ಬುಡೋಡ್ಚಿಯಾ… ಪತೋನಿಯಾ, ಆಲೆನ್ ಬುಡ್ರೆ ಬಲ್ಲಿ… (ಅವಳನ್ನು ಹಿಡಿದುಕೊಳ್ಳಿ ಬಿಡ್ವೇಡಿ) ಎಂದು ಬಲಭಾಗಕ್ಕೆ ಓಡಿದರು. ನಾನು ಗಾಡಿ ಸ್ಟಾರ್ಟ್ ಮಾಡಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದೆ.  ಈ ವೇಳೆ ನೀನ್ಯಾಕೆ ಇಲ್ಲಿ ನಿಲ್ಲಿಸಿದ್ದು,  ಹೋಗ್ ಹೋಗು ಎಂದು ಅವರು ಹೇಳಿದರು. ನಾನು ಮತ್ತೆ ಸ್ವಲ್ಪ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಆಗ “ನಿನ್ನತ್ರ ಅಲ್ವಾ ಹೇಳಿದ್ದು, ಹೋಗಲು… ಹೋಗಿಲ್ಲಂದ್ರೆ ಗಾಡಿಯನ್ನೂ ಹುಡಿ ಮಾಡ್ತೇವೆ, ನಿನ್ನನ್ನೂ ಹುಡಿ ಮಾಡ್ತೇವೆ” ಎಂದು ಧಮ್ಕಿ ಹಾಕಿದರು ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಈ ಘಟನೆ ನಡೆದು ಕೆಲವು ದಿನಗಳ ನಂತರ, ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಯುವತಿಯ ಮೃತದೇಹ ತೀವ್ರವಾಗಿ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.

(ರಿಪೋರ್ಟರ್ ಪ್ರಕಟಿಸಿದ ವರದಿಯ ಆಧಾರದಲ್ಲಿ ಈ ಲೇಖನ ಬರೆಯಲಾಗಿದೆ. ಇದು ಮಹಾನಾಯಕದ ಮಾಹಿತಿಯಲ್ಲ. ರಿಪೋರ್ಟಸ್ ನೀಡಿರುವ ವರದಿಯ ಯೂಟ್ಯೂಬ್ ಚಾನೆಲ್ ಲಿಂಕ್ ಈ ಕೆಳಗೆ ನೀಡಲಾಗಿದೆ.)


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ