ಬೇಡಿಕೆಯಾಗಿಯೇ ಉಳಿದು ಹೋದ ಆತೂರು ಎಲ್ಯಂಗ ರಸ್ತೆ

ಆತೂರು ಎಲ್ಯಂಗ ರಸ್ತೆ ಸಮಸ್ಯೆಯಿಂದ ಇಲ್ಲಿನ ಸಾರ್ವಜನಿಕರು ತೀವ್ರವಾಗಿ ತೊಂದರೆಗೀಡಾಗುತ್ತಿದ್ದು, ಇಲ್ಲಿನ ನಾಗರಿಕರು ಬಳಸುವ ಪ್ರಮುಖ ರಸ್ತೆ ಅತ್ಯಂತ ದುಸ್ಥಿತಿಯಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಇಂತಹದ್ದೊಂದು ರಸ್ತೆ ದುಸ್ಥಿತಿಯಲ್ಲಿದ್ದು, ಆತೂರು ಪೇಟೆ –ಹುಸೈನ್ ನಗರ — ಎಲ್ಯoಗ — ಆತೂರು ಶ್ರೀ ಸದಾಶಿವ ದೇವಸ್ಥಾನವಾಗಿ ಹಾದು ಹೋಗುವ ಈ ರಸ್ತೆಯು ಆತೂರು ಶ್ರೀ ಸದಾಶಿವ ದೇವಸ್ಥಾನದಿಂದ ಎಲ್ಯoಗದವರೆಗೂ ಕಾಂಕ್ರೀಟ್ ರಸ್ತೆಯಾಗಿದೆ. ಆದರೆ ಎಲ್ಯಂಗದಿಂದ ಆತೂರು ಪೇಟೆಯವರೆಗೆ ರಸ್ತೆ ದುಸ್ಥಿತಿಯಲ್ಲಿದೆ.
ಆತೂರು ಪೇಟೆಯಿಂದ 250 ಮೀಟರ್ ರಸ್ತೆ ಟಾರು ರಸ್ತೆಯಾಗಿದ್ದು, ಈ ರಸ್ತೆಯ ಟಾರು ಕಿತ್ತು ಹೋಗಿರುವುದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸಪಡುವಂತಾಗಿದೆ. ಹುಸೈನ್ ನಗರದಲ್ಲಿ 50 ಮೀಟರ್ ನಷ್ಟು ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಉಳಿದ ಸ್ಥಳದಲ್ಲಿ ಟಾರು ಅಥವಾ ಕಾಂಕ್ರೀಟ್ ರಸ್ತೆಯಾಗಿಲ್ಲ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಹೋಗಲು ಜನರು ಪರದಾಡುತ್ತಾರೆ. ಮಳೆಯ ನೀರು ರಸ್ತೆಯ ಹೊಂಡದಲ್ಲಿ ನಿಂತು ವಾಹನ ಸವಾರರು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿದ್ದಾರೆ. ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ನಿತ್ಯ ಸಂಚರಿಸುತ್ತಿದ್ದಾರೆ. ಇವರೆಲ್ಲರೂ ಈ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡಬೇಕಾಗಿರುವ ಅನಿವಾರ್ಯ ಸ್ಥಿತಿ ಇದೆ.
ಈ ರಸ್ತೆಯು ಆತೂರು ಶ್ರೀ ಸದಾಶಿವ ದೇವಸ್ಥಾನ ಹಾಗೂ ಮುಹ್ಯುದ್ದೀನ್ ಜುಮಾ ಮಸೀದಿ ಆತೂರಿಗೆ ಪ್ರಾಮುಖ್ಯ ರಸ್ತೆಯಾಗಿದೆ. ಶಾಸಕರಿಗೆ, ಅಲ್ಪಸಂಖ್ಯಾತ ಇಲಾಖೆಗೆ ಹಾಗೂ ಗ್ರಾಮ ಪಂಚಾಯತ್ ಗೆ ರಸ್ತೆ ಸಮಸ್ಯೆಯ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮುಂದಿನ ಚುನಾವಣೆ ಸಮೀಪಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಇಲ್ಲಿನ ನಾಗರಿಕರು ಮನವಿ ಮಾಡಿದ್ದಾರೆ.
ಅಬೂಬಕ್ಕರ್ ಸಿದ್ದಿಕ್ ಮುನೀರ್ ಆತೂರು
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw