ಕೋಮುವಾದಿಕರಣಗೊಂಡ ಪಠ್ಯಪುಸ್ತಕಗಳನ್ನು ರದ್ದುಗೊಳಿಸಿ-ದಸಂಸ ಆಗ್ರಹ

ನೂತನವಾಗಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಎನ್‌ಇಪಿ (ಹೊಸ ಶಿಕ್ಷಣ ನೀತಿ) ರದ್ದುಗೊಳಿಸಬೇಕು, ಕೋಮುವಾದಿಕರಣಗೊಂಡ ಪಠ್ಯಪುಸ್ತಕಗಳನ್ನು ರದ್ದುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಗ್ರಹಿಸಿದೆ.
ಈ ಕುರಿತಂತೆ ಪತ್ರ ಬರೆದಿರುವ ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, “ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಜನರು ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಆದ್ದರಿಂದ, ತನ್ನ ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ತಾನು ನೀಡಿರುವ ಪ್ರಮುಖ ಭರವಸೆಗಳನ್ನು (ಕಾಂಗ್ರೆಸ್ ಗ್ಯಾರಂಟಿಗಳು) ಜಾರಿಗೆ ತರಬೇಕು. ದಲಿತ ಹಾಗೂ ದಮನಿತ ಸಮುದಾಯದ ಮಕ್ಕಳಿಗೆ ಮಾರಕವಾಗಿರುವ ಅವೈಜ್ಞಾನಿಕ ಎನ್‌ಇಪಿ (ಹೊಸ ಶಿಕ್ಷಣ ನೀತಿ) ರದ್ದು ಮಾಡಬೇಕು. ದ್ವೇಷ ತುಂಬಿದ ಪಠ್ಯ ಪರಿಷ್ಕರಣೆಯನ್ನು ಕೈಬಿಟ್ಟು, ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯವನ್ನೇ ಮುಂದುವರಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಹೈಸ್ಕೂಲ್ ಮಕ್ಕಳಿಗೆ ಈ ವರ್ಷದಿಂದ ಬೈಸಿಕಲ್ ವಿತರಣೆ ಜತೆಗೆ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೂ ಬಿಡುಗಡೆ ಮಾಡಬೇಕು. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಲ್ಲಿನ 7(ಡಿ) ಕಲಂ ತೆಗೆದು, ಪರಿಶಿಷ್ಟರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಬಿಜೆಪಿ ತನ್ನ ದ್ವೇಷ ರಾಜಕಾರಣದಿಂದ ರದ್ದು ಮಾಡಿದ್ದ ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಬೇಕು. ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ, ಪರಿಶಿಷ್ಟ ಸಮುದಾಯದ ಎಲ್ಲ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ ಜಾರಿ ಮಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಅವಧಿಯ ದುರಾಡಳಿತವನ್ನು ಮೆಲುಕು ಹಾಕಿರುವ ಅವರು, “ಕೇಂದ್ರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಹಾಗೂ ಅನೈತಿಕ ಆಪರೇಷನ್ ಕಮಲದ ಮೂಲಕ ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಒಂದು ಕಡೆಯಾದರೆ, ಅವರ ಹಿಂದಿ ಹೇರಿಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಹಲವಾರು ನಿರ್ಧಾರಗಳು ಕನ್ನಡಿಗರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ. ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆಗಳಿಗೆ ಮಂಡಿಯೂರುತ್ತಾ, ಬಿಜೆಪಿ ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕನ್ನಡಿಗರ ಹಿತ ಕಾಯುವಲ್ಲಿ ವಿಫಲರಾದರು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಗ್ಯಾಸ್ ಸೇರಿದಂತೆ ಹಲವು ದಿನಬಳಕೆ ವಸ್ತುಗಳು ರಾಜ್ಯದ ಬಡಜನರ ಕೈ ಸಡುತ್ತಿದ್ದರೆ, ಮತ್ತೊಂದು ಕಡೆ ಆಜಾನ್, ಹಲಾಲ್, ಬುರ್ಕಾ ಹಾಗೂ ಮುಸ್ಲಿಂ ಸಮುದಾಯದ ವ್ಯಾಪಾರಕ್ಕೆ ಜಾತ್ರೆ-ದೇವಾಲಯಗಳಲ್ಲಿ ಹೇರಿದ್ದ ನಿಷೇಧವನ್ನು ಸಮರ್ಥಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಹೇಳಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನವನ್ನು ಕಳೆದಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw