ಟ್ರ್ಯಾಕ್ಟರ್—ಕಾರಿನ ನಡುವೆ ಭೀಕರ ಅಪಘಾತ: ಗಾಯಗೊಂಡಿದ್ದ ಕಾರು ಚಾಲಕ ಸಾವು - Mahanayaka

ಟ್ರ್ಯಾಕ್ಟರ್—ಕಾರಿನ ನಡುವೆ ಭೀಕರ ಅಪಘಾತ: ಗಾಯಗೊಂಡಿದ್ದ ಕಾರು ಚಾಲಕ ಸಾವು

chikkamagaluru
22/12/2023

ಟ್ರಾಕ್ಟರ್ ಮತ್ತು ಕಾರು ನಡುವಿನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕ ಕೊನೆಯುಸಿರೆಳೆದಿದ್ದಾರೆ.

ಮೂಡಿಗೆರೆ ಸಮೀಪದ ಮುತ್ತಿಗೆಪುರ ಎಂಬಲ್ಲಿ ಗುರುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿತ್ತು. ಮಾರುತಿ 800 ಕಾರು ಮತ್ತು ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿ  ಕಾರು ಚಾಲನೆ ಮಾಡುತ್ತಿದ್ದ ಕೀರ್ತಿ ಎಂಬ ಯುವಕನ ಸ್ಥಿತಿ ಗಂಭೀರವಾಗಿತ್ತು.

ಗಾಯಗೊಂಡ ಚಾಲಕನಿಗೆ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಅಂಬುಲೆನ್ಸ್ ಮೂಲಕ ಕರೆದೊಯ್ಯುವ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ನಂತರ ಮೃತದೇಹವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ತಂದು ಶುಕ್ರವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತ ಕೀರ್ತಿ(21 ವರ್ಷ) ಬೇಲೂರು ತಾಲ್ಲೂಕು ಚೀಕನಹಳ್ಳಿ ಗ್ರಾಮದವರು. ಚೀಕನಹಳ್ಳಿ ಗ್ರಾಮದ ದಿವಂಗತ ಹಾಲಪ್ಪ ಎಂಬುವವರ ಪುತ್ರ. ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಕಾಫಿ ಎಸ್ಟೇಟ್ ಒಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಗುರುವಾರ ಮಧ್ಯಾಹ್ನ ಚೀಕನಹಳ್ಳಿ ತನ್ನ ಮನೆಯಿಂದ ಚಿಕ್ಕಳ್ಳದ ತೋಟಕ್ಕೆ ಮಾರುತಿ 800 ಕಾರಿನಲ್ಲಿ ತೆರಳುತ್ತಿದ್ದಾಗ ಮೂಡಿಗೆರೆ ಸಮೀಪದ ಮುತ್ತಿಗೆಪುರದಲ್ಲಿ ಎದುರಿನಿಂದ ಬಂದ ಟ್ರಾಕ್ಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಟ್ರಾಕ್ಟರ್ ಚಿಕ್ಕಮಗಳೂರು ತಾಲ್ಲೂಕು ಹಾಂದಿ ಮೂಲದ ವ್ಯಕ್ತಿಗೆ ಸೇರಿದೆಂದು ತಿಳಿದುಬಂದಿದೆ.

ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಕೀರ್ತಿ ತಂದೆ ತಾಯಿ ಇಬ್ಬರು ಮರಣಹೊಂದಿದ್ದು, ಓರ್ವ ಸಹೋದರ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ