ನರ್ಸ್ ಬಟ್ಟೆ ಬದಲಿಸುವ ವೇಳೆ ವಿಡಿಯೋ ಮಾಡಿದ ಆರೋಪಿಯ ಬಂಧನ: ಖಾಸಗಿ ಆಸ್ಪತ್ರೆಯಲ್ಲಿ ಘಟನೆ
ಬೆಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳಾ ನರ್ಸ್ಗಳ ಖಾಸಗಿತನಕ್ಕೆ ಧಕ್ಕೆ ತಂದಿದ್ದ ಸೈಕೋ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಾಗರಬಾವಿ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ಅದೇ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು.
ಆರೋಪಿಯು ತನ್ನ ಮಹಿಳಾ ಸಹೋದ್ಯೋಗಿಗಳು ಬಟ್ಟೆ ಬದಲಿಸುವ ಸಂದರ್ಭದಲ್ಲಿ ಗುಟ್ಟಾಗಿ ಮೊಬೈಲ್ ಮೂಲಕ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸುತ್ತಿದ್ದನು. ಇವನ ಈ ವಿಕೃತ ಕೃತ್ಯವನ್ನು ಗಮನಿಸಿದ ನರ್ಸ್ವೊಬ್ಬರು ಕೂಡಲೇ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರಾದ ಡಾ. ಚೇತನ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಹಲವಾರು ಮಹಿಳಾ ಸಿಬ್ಬಂದಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸುರಕ್ಷಿತವಾಗಿರಬೇಕಾದ ಸ್ಥಳದಲ್ಲೇ ಇಂತಹ ಘಟನೆ ನಡೆದಿರುವುದು ಮಹಿಳಾ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























