ಮಾಧ್ಯಮಗಳ ಬಹಿಷ್ಕಾರದಿಂದ ಮುಕ್ತವಾದ ನಟ ದರ್ಶನ್: ವರಮಹಾಲಕ್ಷ್ಮೀ ಹಬ್ಬದ ದಿನವೇ ‘ಕ್ಷಮೆ’ ಕೇಳಿದ ನಟ - Mahanayaka
1:11 PM Wednesday 27 - August 2025

ಮಾಧ್ಯಮಗಳ ಬಹಿಷ್ಕಾರದಿಂದ ಮುಕ್ತವಾದ ನಟ ದರ್ಶನ್: ವರಮಹಾಲಕ್ಷ್ಮೀ ಹಬ್ಬದ ದಿನವೇ ‘ಕ್ಷಮೆ’ ಕೇಳಿದ ನಟ

darshan
25/08/2023


Provided by

ಬೆಂಗಳೂರು: ನಟ ದರ್ಶನ್ ಅವರಿಗೆ ದೃಶ್ಯ ಮಾಧ್ಯಮಗಳು ಹಾಕಿದ್ದ ಬಹಿಷ್ಕಾರ ಕೊನೆಗೂ ತೆರವಾಗಿದ್ದು,  ವರಮಹಾಲಕ್ಷ್ಮೀ ಹಬ್ಬದ ದಿನವೇ ಕನ್ನಡ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ನಡೆದ ಮಾತುಕತೆಯ ಬಳಿಕ ನಟ ದರ್ಶನ್ ಗೆ ಹಾಕಲಾಗಿದ್ದ ಬಹಿಷ್ಕಾರ ತೆರವಾಗಿದೆ.

ಈ ಬಗ್ಗೆ ನಟ ದರ್ಶನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ನಾನು ಪ್ರತಿಕ್ರಿಯೆ ನೀಡಿದ್ದೆ ಅಷ್ಟೆ.. ಇತರ ಮಾಧ್ಯಮಗಳ ಬಗ್ಗೆ ನಾನು ಆಡಿರೋ ಮಾತು ಅದಾಗಿರಲಿಲ್ಲ ಅಂತ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮಾತಿನಿಂದ ನೋವುಂಟಾಗಿದ್ದರೆ ಅಂತಹ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರೋದ್ರಲ್ಲಿ ಯಾವುದೇ ತಪ್ಪಿಲ್ಲ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರೋ ಮಾಧ್ಯಮ ರಂಗದ ಕ್ಷಮೆ ಇರಲಿ. ಉತ್ತಮ ಸಮಾಜಕ್ಕೆ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ನನ್ನ ಬೆಳವಣಿಗೆಗೆ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟು ಇದೆ ಅಂತ ದರ್ಶನ್ ಹೇಳಿದ್ದಾರೆ.

ಮಾಧ್ಯಮಗಳ ಬಗ್ಗೆ ದರ್ಶನ್ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ದೃಶ್ಯ ಮಾಧ್ಯಮಗಳು  ದರ್ಶನ್ ಗೆ ಬಹಿಷ್ಕಾರ ಹಾಕಿದ್ವು.. ಮಾಧ್ಯಮಗಳ ಬಹಿಷ್ಕಾರದ ನಡುವೆಯೇ ನಟ ದರ್ಶನ್ ತಮ್ಮ ಅಭಿಮಾನಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೇ ತಮ್ಮ ಚಿತ್ರದ ಪ್ರಚಾರ ಮಾಡಿಸಿದ್ದರು. ಆದ್ರೆ ಇದೀಗ ಕೊನೆಗೂ ನಟನೋರ್ವನಿಂದ ಕ್ಷಮೆ ಕೇಳಿಸುವ ಪ್ರಯತ್ನ ಯಶಸ್ವಿಯಾಗಿದೆ.

ದರ್ಶನ್ ಬಗ್ಗೆ ನೂರಾರು ರೀತಿಯ ನೆಗೆಟಿವ್ ವರದಿಗಳನ್ನ ಮಾಧ್ಯಮಗಳು ಮಾಡಿವೆ, ಆದ್ರೆ ದರ್ಶನ್ ಅವರು ಮಾಧ್ಯಮವನ್ನ ಬಹಿಷ್ಕರಿಸಲಿಲ್ಲ, ಮಾಧ್ಯಮಗಳ ಬಗ್ಗೆ ಒಂದು ಮಾತನಾಡಿದ ತಕ್ಷಣವೇ ಅವರನ್ನು ಬಹಿಷ್ಕಾರ ಹಾಕಲಾಗಿದೆ ಅನ್ನೋದು ದರ್ಶನ್ ಅಭಿಮಾನಿಗಳ ಆಕ್ರೋಶದ ಮಾತುಗಳಾಗಿತ್ತು.

ಮಾಧ್ಯಮಗಳ ಬಗ್ಗೆ ದರ್ಶನ್ ಅವಾಚ್ಯ ಶಬ್ದ ಬಳಸಿರೋದು ತಪ್ಪು ನಿಜ. ಒಬ್ಬ ಜವಾಬ್ದಾರಿಯುತ ನಟನಾಗಿ ಅವರು ಆ ರೀತಿಯ ಪದ ಬಳಕೆ ಮಾಡಬಾರದಿತ್ತು. ಆದ್ರೆ ಮನುಸ್ಮೃತಿ ಆಧಾರಿತ ‘ಬಹಿಷ್ಕಾರ’ ವ್ಯವಸ್ಥೆ ಎಂಬಂತಹ ವ್ಯವಸ್ಥೆಯೊಂದು ನಟನನ್ನ ಬಹಿಷ್ಕಾರ ಮಾಡುವ ಪದ್ಧತಿ ಕೂಡ ಸಾಂವಿಧಾನಿಕವಲ್ಲ ಮುಂದಿನ ದಿನಗಳಲ್ಲಿ ಇದೊಂದು ಪಿಡುಗಿನಂತೆ ಮುಂದುವರಿಯೋ ಅಪಾಯ ಇದೆ, ನಟನ ಹೇಳಿಕೆ ಬಗ್ಗೆ ಸ್ಟುಡಿಯೋಗೆ ಕರೆಸಿ ನೇರಾ ನೇರ ಚರ್ಚೆ ಮಾಡಬಹುದಿತ್ತು, ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರಬೇಕು, ಹೇಳಿಕೆಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ಅದೊಂದು ಪ್ರತಿಷ್ಠೆಯೋ, ಶ್ರೇಷ್ಟತೆಯೋ ಎಂಬಂತೆ ಬಿಂಬಿಸಿ ಬಹಿಷ್ಕಾರ ಹಾಕೋದು ಮಾಧ್ಯಮ ಧರ್ಮವೇ ಎನ್ನುವ ಅಭಿಪ್ರಾಯಗಳು ಕೂಡ ಘಟನೆಯ ಬಳಿಕ ಚರ್ಚೆಗೀಡಾಗಿದ್ದವು. ಅಂತಿವಾಗಿ ಇದೀಗ ನಟನ ವಿರುದ್ಧದ ಬಹಿಷ್ಕಾರದ ಯುದ್ಧ ಸುಖಾಂತ್ಯವಾಗಿದೆ.

ಇತ್ತೀಚಿನ ಸುದ್ದಿ