Exclusive: ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಕ್ರಮ ಕಟ್ಟಡ ನಿರ್ಮಾಣ!? - Mahanayaka

Exclusive: ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಕ್ರಮ ಕಟ್ಟಡ ನಿರ್ಮಾಣ!?

bandipura
12/08/2023


Provided by

ಚಾಮರಾಜನಗರ: ಚಿತ್ರನಟ, ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಜಕ್ಕಹಳ್ಳಿ ಗ್ರಾಮದ ಸರ್ವೇ ನಂ 105 ರಲ್ಲಿ ನಟ ಗಣೇಶ್ ಜೆಸಿಬಿ, ಕಾಂಕ್ರೀಟ್ ಬಳಸಿಕೊಂಡು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಇದು ಅಕ್ರಮ ಎಂಬ ಆರೋಪ‌ ಕೇಳಿಬಂದಿದೆ.

ತಾತ್ಕಾಲಿಕ ಕಟ್ಟಡಕ್ಕಷ್ಟೇ ಅನುಮತಿ:

ಚಿತ್ರನಟ ಗಣೇಶ್ ಜಕ್ಕಹಳ್ಳಿ ಗ್ರಾಮದಲ್ಲಿ 1.2 ಎಕರೆ ಜಮೀನನ್ನು ಖರೀದಿಸಿದ್ದು ಪ್ರಾದೇಶಿಕ ಆಯುಕ್ತರ ಅಧ್ಯಕ್ಷರಾಗಿರುವ ಸೂಕ್ಷ್ಮ ಪರಿಸರ ವಲಯ ನಿರ್ವಹಣಾ ಸಮಿತಿಯಿಂದ ತಾತ್ಕಾಲಿಕ ವಾಸದ ಮನೆಗೆ ಅನುಮತಿ ಪಡೆದುಕೊಂಡಿದ್ದಾರೆ‌. ಆದರೆ, ವಾಸದ ಮನೆಯು ಶಾಶ್ವತ ಕಟ್ಟಡಗಳಾಗಿರಬಾರದು ಎಂಬ ಷರತ್ತಿನ ನಡುವೆಯೂ ಕಾಂಕ್ರಿಟ್, ಜೆಸಿಬಿ ಬಳಸಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾತ್ಕಾಲಿಕ ಮನೆಯು ವಸತಿ ಉದ್ದೇಶಕ್ಕಷ್ಟೇ ಬಳಸಬೇಕು, ವನ್ಯಜೀವಿಗಳ ಸಂಚಾರಕ್ಕೆ ಧಕ್ಕೆ ತರಕೂಡದು, ಸಮಿತಿ ಮುಂದೆ ಹಾಜರುಪಡಿಸಿದ್ದ ಪ್ಲಾನ್ ನಂತೆ ಮನೆ ಕಟ್ಟಬೇಕು, ಯಾವುದೇ ಕಾರಣಕ್ಕೂ ವಿಸ್ತೀರ್ಣ, ಮಾದರಿ ಬದಲಿಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ.

ಪರಿಸರವಾದಿಗಳ ಆರೋಪ ಏನು:

ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಎಗ್ಗಿಲ್ಲದೇ ಕಾಮಗಾರಿಗಳು ನಡೆಯುತ್ತಿದ್ದು ಅರಣ್ಯ ಇಲಾಖೆಗೆ ಫೋಟೋ, ವೀಡಿಯೋ, ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಉಳಿದುಕೊಳ್ಳಲು ಸಣ್ಣ ಮನೆಯಷ್ಟೇ ಕಟ್ಟಿಕೊಳ್ಳಲ್ಲಷ್ಟೇ ಅನುಮತಿ ಇದ್ದು ಇದು ಪಾಲನೆ ಆಗುತ್ತಿಲ್ಲ. ಶ್ರೀಮಂತರು, ಪ್ರಭಾವಿಗಳು ಮಾಡಿದರೆ ತಪ್ಪಿಲ್ಲ- ರೈತರು ಮಾಡಿದರೇ ತಪ್ಪು ಎಂಬ ನೀತಿ ಅನುಸರಿಸಲಾಗುತ್ತಿದೆ.

ಎಲ್ಲರೂ ಕಟ್ಟಡಗಳನ್ನು ಕಟ್ಟಿಕೊಂಡು ಪ್ರಾಣಿಗಳು ರೈತರ ಕೃಷಿಭೂಮಿಯತ್ತ ದೌಡಾಯಿಸುತ್ತಿದೆ. ಜಕ್ಕಹಳ್ಳಿ, ಮಂಗಲ ಗ್ರಾಮಗಳ ಸುತ್ತಮುತ್ತ ಈ ರೀತಿ ಕಾಮಗಾರಿಗಳು ಸಾಕಷ್ಟು ನಡೆಯುತ್ತಿದೆ ಎಂದು ಜೋಸೆಫ್‌ ಹೂವರ್ ಕಿಡಿಕಾರಿದ್ದಾರೆ.

ಮನೆ ನಿರ್ಮಾಣ ಸಂಬಂಧ  ಗ್ರಾಪಂ ಸಿಬ್ಬಂದಿ, ತಹಸಿಲ್ದಾರ್ ಈ ಸಂಬಂಧ ಸ್ಥಳ ಮಹಜರು ನಡೆಸಿಲ್ಲ ಎನ್ನಲಾಗಿದ್ದು, ತಾತ್ಕಾಲಿಕ ಮನೆಗೆ ಅನುಮತಿ ಪಡೆದು ಬೃಹತ್ ಕಾಮಗಾರಿ ನಡೆಸುತ್ತಿರುವ ವಿವಾದ ಈಗ ನಟ ಗಣೇಶ್ ಮೇಲೆ ಏರಿದೆ.

ಇತ್ತೀಚಿನ ಸುದ್ದಿ